85 ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಬಿಬಿಎಂಪಿ, ಜಲಮಂಡಳಿ, ಬಿಡಿಎ!
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಸಮನ್ವಯ ಕೊರತೆಯಿಂದ ನಗರದಲ್ಲಿ ರಸ್ತೆಗುಂಡಿಗಳ ಸಮಸ್ಯೆ, ಕಾಮಗಾರಿಗಳ ವಿಳಂಬಗಳು ಸಾಮಾನ್ಯವಾಗಿದ್ದವು. ಇದೀಗ ಶುಲ್ಕ ಪಾವತಿ ವಿಚಾರಕ್ಕೆ ಸ್ಥಳೀಯ ಸಂಸ್ಥೆಗಳ ನಡುವೆಯೇ ತಿಕ್ಕಾಟ ಆರಂಭವಾಗಿದೆ.
ಬಿಬಿಎಂಪಿ, ಜಲಮಂಡಳಿ ಹಾಗೂ ಬಿಡಿಎ ವಿದ್ಯುತ್ ಬಿಲ್ ಬಾಕಿಉಳಿಸಿಕೊಂಡಿದ್ದು, ಬೆಸ್ಕಾಂಗೆ 85 ಕೋಟಿ ರೂ ಪಾವತಿ ಮಾಡದೆ ಬಾಕಿ ಇಟ್ಟಿದೆ. ಹೀಗಾಗಿ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತಕ್ಕೆ ಆದೇಶಿಸಲಾಗಿದೆ.
ಜಯನಗರ ವಿಭಾಗದ ಉಪವಿಭಾಗಗಳಾದ ಜಯನಗರ, ಹೊಸೂರು ರಸ್ತೆ, ಇಸ್ರೋ ಲೇಔಟ್, ಜೆ.ಪಿ.ನಗರ, ಪದ್ಮನಾಭನಗರ, ಕತ್ರಿಗುಪ್ಪೆ ಹಾಗೂ ಉತ್ತರಹಳ್ಳಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಸಂಪರ್ಕ ಹಾಗೂ ಬೀದಿ ದೀಪಗಳ ಸಂಪರ್ಕ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಯ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಆರ್. ಚನ್ನಕೇಶವ ಮೂರ್ತಿ ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮಂಡಳಿಯು ರೂ. 44.04 ಕೋಟಿ ಗಳು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ರೂ. 2.57 ಕೋಟಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯು ರೂ.38.56 ಕೋಟಿ ರೂಗಳನ್ನು ಬಾಕಿ ಉಳಿಸಿಕೊಂಡಿವೆ . ಎಲ್ಲ ಸೇರಿ ಒಟ್ಟು ರೂ.85.17 ಕೋಟಿ ಬಾಕಿಯಿದೆ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಶುಲ್ಕ ಪಾವತಿಗೆ ಮನವಿ ಮಾಡಲಾಗಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಆದೇಶ ಮಾಡಲಾಗಿದೆ ಎಂದು ಅವರು ಪ್ರಕಟಣೆ ಹೊರಡಿಸಿದ್ದಾರೆ.