5ನೇ ದಿನಕ್ಕೆ ಕಾಲಿಟ್ಟ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ರಾಜಕಾಲುವೆ, ಕೆರೆ ಒತ್ತುವರಿ ಜಾಗದ ತೆರವು ಕಾರ್ಯಾಚರಣೆಯದ್ದೇ ಎಲ್ಲಡೆ ಸುದ್ದಿ ಹರಿದಾಡುತ್ತಿದೆ. ಇತ್ತೀಚಿನ ಪ್ರವಾಹ ಸದೃಶ ಮಳೆಗೆ ಬೆಂಗಳೂರಿನ ಪೂರ್ವ ಆಗ್ನೇಯ ಭಾಗದಲ್ಲಿ ಭಾರೀ ಸಮಸ್ಯೆಯುಂಟಾಗಿತ್ತು. ಇದಕ್ಕೆ ರಾಜಕಾಲುವೆ, ಕೆರೆ ಒತ್ತುವರಿ, ಚರಂಡಿ ಅತಿಕ್ರಮಣ ಮಾಡಿ ಅಲ್ಲಿ ಮನೆ, ಕಟ್ಟಡಗಳನ್ನು ನಿರ್ಮಿಸಿರುವುದೇ ಕಾರಣ ಎಂದು ಬಿಬಿಎಂಪಿ ಒತ್ತುವರಿ ಕಾರ್ಯ ನಡೆಸುತ್ತಿದ್ದು ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ನಿಜವಾಗಿಯೂ ಬಿಬಿಎಂಪಿ ಸಮಸ್ಯೆಯನ್ನು ಬಗೆಹರಿಸುವ ಗಂಭೀರ ಆಲೋಚನೆ ಹೊಂದಿದೆಯೇ ಅಥವಾ ಕೇವಲ ಜನರ ಕಣ್ಮರೆಸುವ ತಂತ್ರವೇ ಎಂಬ ಸಂದೇಹಗಳು ವ್ಯಕ್ತವಾಗುತ್ತಿದೆ. ಸ್ಟಾರ್ಮ್ ವಾಟರ್ ಡ್ರೈನ್ ಅತಿಕ್ರಮಣ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಗುರುವಾರ 4 ವಲಯಗಳಲ್ಲಿ 29 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ. ಇದುವರೆಗೆ 73 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ. ಮೊದಲ ಮೂರು ದಿನ ತೆರವು ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿರುವ ಪ್ರದೇಶದಲ್ಲಿ ಈಗ ಕಾರ್ಯಾಚರಣೆ ನಿಲ್ಲಿಸಲಾಗಿದೆ.
ಸಮೀಕ್ಷೆಯ ನಂತರವೇ ತೆರವು ಕಾರ್ಯ: ಬಿಬಿಎಂಪಿ ಸಮೀಕ್ಷೆ ಕೈಗೊಂಡ ನಂತರ ತೆರವು ಕಾರ್ಯ ನಡೆಸಲು ನಿರ್ಧರಿಸಿದೆ. ಬಿಬಿಎಂಪಿಯ ಈ ಹಠಾತ್ ನಿಲುವು ಬದಲಾವಣೆಯ ಭಾಗವಾಗಿ, ಬಿಬಿಎಂಪಿ ಸರ್ವೇ ಪೂರ್ಣಗೊಳ್ಳುವವರೆಗೂ ಟಾಸ್ಕ್ ಫೋರ್ಸ್ ಅನ್ನು ಸ್ಥಾಪಿಸಲಾಗಿದೆ. ವಾಗ್ದೇವಿ ಲೇಔಟ್, ಮುನ್ನೇಕೊಳಲು, ಕಸವನಹಳ್ಳಿ ಗ್ರಾಮ, ಎಬಿಕೆ ವಿಲೇಜ್, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನಿ ಬ್ರೂಕ್ಸ್ ದೊಡ್ಡಕನಹಳ್ಳಿ, ಬೆಳತ್ತೂರು ಗ್ರಾಮ, ಸದಾಮಂಗಲ ಗ್ರಾಮ, ಬೊಳ್ಳೆನಿನಿ ಸಾಸ ಅಪಾರ್ಟ್‌ಮೆಂಟ್ ಇಂಟೀರಿಯರ್ ಮತ್ತು ಸಾಯಿ ಗಾರ್ಡನ್ ಲೇಔಟ್‌ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ.