ಆಟೋ ಚಾಲಕನನ್ನ ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗ್ಯಾಂಗ್
ರೋಗಿಗಳ ಮುಂದೆ ಕೂಗಾಟ ನಡೆಸಿ ರೌಡಿ ವರ್ತನೆ ತೋರಿದ್ದಾನೆ ಎಂದು ಆರೋಪಿಸಿ ವೈದ್ಯ ಹಾಗೂ ಆತನ ಸಹಚರರು ಕುಡಿದ ಮತ್ತಿನಲ್ಲಿ ಆಟೋ ಚಾಲಕನನ್ನ ವಿವಸ್ತ್ರಗೊಳಿಸಿ ಶೌಚಾಲಯಕ್ಕೆ ಕರೆದೊಯ್ದು ಚಾಲಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯ ಎಸಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ನಿವಾಸಿ ಮುರುಳಿ ( 26 ) ಹಲ್ಲೆಗೊಳಗಾದ ಆಟೋ ಚಾಲಕ. ಈತ ನೀಡಿದ ದೂರಿನ ಅನ್ವಯ ಖಾಸಗಿ ಆಸ್ಪತ್ರೆಯ ವೈದ್ಯ ರಾಕೇಶ್ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಏನಿದು ಪ್ರಕರಣ:
ಆರೋಪಿ ರಾಕೇಶ್ ಬಾಗಲೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಹಲವು ಬಾರಿ ಬಾಡಿಗೆಗಾಗಿ ಮುರುಳಿ ಆಟೋದಲ್ಲಿ ಓಡಾಡಿ ಸಲುಗೆ ಬೆಳೆಸಿಕೊಂಡಿದ್ದ. ನ.4 ರಂದು ಮುರುಳಿಗೆ ಕರೆ ಮಾಡಿ ಬಾಗಲೂರು ಬಳಿಯಿರುವ ಕಂಟ್ರಿ ಕ್ಲಬ್ ಬಳಿಗೆ ಬಿರಿಯಾನಿ ಪಾರ್ಸಲ್ ತರುವಂತೆ ಸೂಚಿಸಿದ್ದಾನೆ.
ವೈದ್ಯನ ಸೂಚನೆ ಮೇರೆಗೆ ಲ್ಯಾಬ್ ಟೆಕ್ನಿಷಿಯನ್ ಮಹೇಶ್ ಜೊತೆ ಆಟೋದಲ್ಲಿ ಹೋಗಿ ಮುರುಳಿ ಅಡುಗೆ ಸರಬರಾಜು ಮಾಡಿದ್ದ. ಬಾಡಿಗೆ ಮುಗಿಸಿಕೊಂಡು ಮನೆಗೆ ಹೋಗುವಾಗ ಆರೋಪಿ ಆಸ್ಪತ್ರೆಯ ಮತ್ತೋರ್ವ ವೈದ್ಯ ಸ್ವಾಮಿ ಎಂಬುವರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾನೆ. ಇದರಂತೆ ಆಸ್ಪತ್ರೆಗೆ ಹೋಗಿ ಸ್ವಾಮಿ ಎಂಬುವರನ್ನು ಚಾಲಕ ಕರೆದಿದ್ದಾನೆ.
ಬರುವುದು ತಡವಾದ ಹಿನ್ನೆಲೆ ಆಟೋ ಚಾಲಕನಿಗೆ ರಾಕೇಶ್ ಗದರಿಸಿದ್ದಾನೆ. ನಂತರ ಊಟ ಬಡಿಸುವಂತೆ ಮುರುಳಿಗೆ ರಾಕೇಶ್ ತಾಕೀತು ಮಾಡಿದ್ದಾನೆ. ಒಲ್ಲದ ಮನಸ್ಸಿನಿಂದ ಊಟ ಬಡಿಸುವಾಗ ಚಾಲಕ ಮುರುಳಿ ರೌಡಿ ವರ್ತನೆ ತೋರಿ ನನ್ನನ್ನು ರೋಗಿಗಳ ಮುಂದೆ ಅವಮಾನಿಸಿದ್ದಾನೆ ಎಂದು ರಾಕೇಶ್ ಶೆಟ್ಟಿ ಆರೋಪಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮುರುಳಿ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಆಟೋ ಚಾಲಕ ಮುರುಳಿಯನ್ನು ಶೌಚಾಲಯಕ್ಕೆ ಕರೆದೊಯ್ದು ರಾಕೇಶ್ ಶೆಟ್ಟಿ ಎಂಬಾತ ಹಾಗೂ ಆತನ ಸಹಚರರು ಮೊಬೈಲ್ ಕಸಿದುಕೊಂಡಿದ್ದಾರೆ. ಈ ವೇಳೆ, ಚಾಲಕನನ್ನು ವಿವಸ್ತ್ರಗೊಳಿಸಿ ವೈದ್ಯರ ಗ್ಯಾಂಗ್ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯ ಎಸಗಿ, ಅಲ್ಲಿಂದ ಪರಾರಿಯಾಗಿದೆ. ಮಾರನೇ ದಿನ ಎಚ್ಚರಗೊಂಡ ಚಾಲಕ, ಬೆತ್ತಲೆಯಾಗೇ ಹೊರ ಬಂದು ಸ್ಥಳೀಯರ ನೆರವಿನಿಂದ ಮನೆಯವರಿಗೆ ವಿಷಯ ತಿಳಿಸಿ, ಯಲಹಂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಕುರಿತು ಬಾಗಲೂರು ಪೊಲೀಸ್ ಠಾಣೆಗೆ ಮುರುಳಿ ದೂರು ನೀಡಿದ್ದು, ಈ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಬಂಧಿಸಿದ್ದಾರೆ.