ವರನಟ ರಾಜ್ಕುಮಾರ್ ಅವರ ಕುಟುಂಬದ ಕಿರಿಯ ಕೊಂಡಿ ಕಳಚಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar Passes Away) ಅವರ ಅಗಲಿಕೆ ಸುದ್ದಿ ಸಿನಿರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿಯಿತು. ನಿನ್ನೆ ಸಂಜೆಯಿಂದಲೇ ಪುನೀತ್ ರಾಜ್ಕುಮಾರ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಂದು ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ಇಡಲಾಗಿದ್ದು, ಅವರ ಅಭಿಮಾನಿಗಳು ಅಲ್ಲಿಯೇ ತಮ್ಮಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ 3 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
3 ಗಂಟೆಯ ನಂತರ ಪುನೀತ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋಗೆ (Kanteerava Studio) ತೆಗೆದುಕೊಂಡು ಹೋಗಲಾಗುತ್ತದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಅಲ್ಲಿ ಅಪ್ಪು ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನಿನಲ್ಲಿ ಸರ್ಕಾರದ ಸಕಲ ಗೌರವಗಳೊಂದಿಗೆ ಪುನೀತ್ ರಾಜ್ಕುಮಾರ್ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಈ ಕುರಿತಾಗಿ ನಿನ್ನೆಯೇ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಲ್ಲಿ ತಿಳಿಸಲಾಗಿದೆ. ಇನ್ನು ಇಂದು ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸದ್ಯಕ್ಕೆ ನಿರ್ಧರಿಸಿದ್ದಾರೆ.