
“ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹೊಸಕೋಟೆಗೆ ಶೀಘ್ರ ಮೆಟ್ರೋ ಸಂಪರ್ಕ ಕಲ್ಪಿಸಲು ಅಗತ್ಯ ಯೋಜನೆ ಸಿದ್ಧಪಡಿಸಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಹೊಸಕೋಟೆ ತಾಲೂಕಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಪಂಚಾಯಿತಿ ಹೊಸಕೋಟೆ ಹಾಗೂ 28 ಗ್ರಾಮ ಪಂಚಾಯಿತಿಗಳ ವತಿಯಿಂದ ಇ-ಸ್ವತ್ತು ಹಾಗೂ ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.”ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲವು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದು, ತಾಲೂಕುಗಳ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಹೊಸಕೋಟೆಯೂ ಸಹ ಬಹಳ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು, ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೆಟ್ರೋ ಸಂಪರ್ಕ ಹೊಸಕೋಟೆಗೆ ಕಲ್ಪಿಸಲಾಗುವುದು. ಇದಕ್ಕಾಗಿ ಡಿಪಿಆರ್ ಸಿದ್ದಪಡಿಸಲು ಅಧಿಕಾರಿಗಳು ಸೂಚಿಸುತ್ತೇನೆ” ಎಂದರು.
“5 ಗ್ಯಾರಂಟಿಗಳಿಂದ ನಮ್ಮ ಕೈಗೆ ಶಕ್ತಿ ತುಂಬಿದೆ. ಬೆಲೆ ಏರಿಕೆ, ಆದಾಯ ಪಾತಾಳಕ್ಕೆ ಇಳಿದ ಸಂಧರ್ಭದಲ್ಲಿ ಗ್ಯಾರಂಟಿ ಜಾರಿ ತಂದೆವು. ಈಗ ಅದೇ ಗ್ಯಾರಂಟಿಗಳು ದೇಶಕ್ಕೆ ಮಾದರಿ ಎನಿಸಿಕೊಂಡಿದೆ. ಇತರ ರಾಜ್ಯಗಳು ನಮ್ಮ ಗ್ಯಾರಂಟಿಗಳನ್ನು ಫಾಲೋ ಮಾಡುತ್ತಿದ್ದಾರೆ. ನರೇಗಾ ಯೋಜನೆ, ಆಹಾರ ಭದ್ರತೆ ಕಾಯ್ದೆ, ಉಳುವವನಿಗೆ ಭೂಮಿ, ಭಗರ್ ಹುಕುಂ, ಕ್ಷೀರಧಾರೆ ಸಬ್ಸಿಡಿ, ಐದು ಗ್ಯಾರಂಟಿ ಮುಂತಾದ ಯೋಜನೆಗಳು ಕೇಂದ್ರ ಹಾಗೂ ರಾಜ್ಯಗಳಲ್ಲಿ ನಮ್ಮ ಸರ್ಕಾರ ಇದ್ದಾಗಲೇ ಜಾರಿಯಾದವು. ಜನರ ಸೇವೆಯಿಂದ ಸರ್ಕಾರ ಉಳಿಯಲು ಸಾಧ್ಯ. ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ”.
“ಆರನೇ ಗ್ಯಾರಂಟಿ ಇ-ಸ್ವತ್ತು, ಇಂದು ಹೊಸಕೋಟೆಯಲ್ಲಿ 6000 ಇ-ಸ್ವತ್ತು ನೀಡಲಾಗುತ್ತಿದೆ. 1 ಕೋಟಿ 11 ಲಕ್ಷ 11 ಸಾವಿರ ಸ್ವತ್ತು ರಾಜ್ಯಾದ್ಯಂತ ನೀಡಲಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ವರ್ಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ರೈತರ ಕೃಷಿ ಭೂಮಿಗಳಿಗೆ 19,000 ಕೋಟಿ ರೂ.ಗಳ ವೆಚ್ಚದಲ್ಲಿ 10 ಹೆಚ್.ಪಿ ವರೆಗೆ ವಿದ್ಯುತನ್ನು ಪ್ರತಿ ನಿತ್ಯ 07 ಗಂಟೆ ನೀಡುತ್ತಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆ ಕಟ್ಟೆ, ಕುಡಿಯುವ ನೀರು ತುಂಬಿಸಲು ಸರ್ಕಾರ ಪಣ ತೊಟ್ಟಿದ್ದು, 2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ ಗೊಳ್ಳಲಿದೆ” ಎಂಬ ಭರವಸೆ ನೀಡಿದರು.ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿ, “ಚುನಾವಣೆಯಲ್ಲಿ ಮಾತು ನೀಡಿದಂತೆ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿದ್ದು, ನುಡಿದಂತೆ ನಡೆದಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮೆಟ್ರೋ, ಯುಜಿಡಿ, ಎತ್ತಿನಹೊಳೆ ಯೋಜನೆಯು ಆದಷ್ಟು ಬೇಗ ಬರಬೇಕು” ಎನ್ನುವುದು ನನ್ನ ಒತ್ತಾಸೆಯಾಗಿದೆ” ಎಂದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ.ಬಿ.ಟಿ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, “ಸರ್ವರಿಗೂ ಸಮಾನ ಅವಕಾಶ ಎಂಬ ಧ್ಯೇಯದೊಂದಿಗೆ ಎಲ್ಲ ವರ್ಗದವರಿಗೂ ಸೌಲಭ್ಯ ನೀಡಲಾಗುತ್ತಿದೆ. ನವ ಕರ್ನಾಟಕ ನಿರ್ಮಾಣದ ದಿಟ್ಟ ಹೆಜ್ಜೆ ಇಟ್ಟಿರುವ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಿರೋಧ ಪಕ್ಷಗಳು ವಿರೋಧ ಮಾಡಿದರು. ನಾವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶದಲ್ಲಿ ಯಾರೂ ಜಾರಿಗೆ ತಂದಿಲ್ಲ”.”ಪ್ರತಿ ಕುಟುಂಬದಲ್ಲಿ 5-6 ಸಾವಿರ ಪ್ರತಿ ತಿಂಗಳು ಉಳಿತಾಯ ಮಾಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಐಟಿ ಇಲಾಖೆಯಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ. ನರೇಗಾ ಯೋಜನೆಯಡಿ 13 ಕೋಟಿ ಮಾನವ ದಿನಗಳು ಸೃಜಿಸಿ, ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಗಳನ್ನು ನಿರ್ಮಿಸಿದ್ದು. ಅಲ್ಲಿ 50,000 ಮಕ್ಕಳು ಕಲಿಯುತ್ತಿದ್ದಾರೆ. ರಾಜ್ಯದಲ್ಲಿ 8,760 ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಮಾದರಿ ತಾಲೂಕು ಪಂಚಾಯಿತಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಹೊಸಕೋಟೆಯಲ್ಲಿ ಮೊದಲ ಮಾದರಿ ತಾಲೂಕು ಪಂಚಾಯಿತಿ ನಿರ್ಮಿಸಲಾಗುವುದು” ಎಂದು ತಿಳಿಸಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್ ಬಚ್ಚೇಗೌಡ ಅವರು ಮಾತನಾಡಿ, “ಇಂದಿನ ಕಾರ್ಯಕ್ರಮದಲ್ಲಿ 60 ಗ್ರಾಮಗಳು ಇ – ಸ್ವತ್ತು ಮುಕ್ತ ಎಂದು ಘೋಷಿಸಿದ್ದು 6000 ಇ-ಸ್ವತ್ತುನ್ನು ನೀಡಲಾಗುತ್ತಿದೆ. 1,010 ನಿವೇಶನ ಹಕ್ಕು ಪತ್ರ ವಿತರಣೆ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದರಲ್ಲದೇ, ಹೊಸಕೋಟೆಗೆ ಮೆಟ್ರೋ ಸಂಪರ್ಕ ಹಾಗೂ ಕಾವೇರಿ ನೀರು ಪೂರೈಕೆ, ಮಾದರಿ ತಾಲೂಕು ಪಂಚಾಯಿತಿ ನಿರ್ಮಾಣ ಮಾಡಲು” ಸಚಿವರಿಗೆ ಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಶ್ರೀನಿವಾಸ್, ಎಂಎಲ್ಸಿ ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.