2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ 30-35 ಟಿಕೆಟ್ ಮಹಿಳೆಯರಿಗೆ ಮೀಸಲು: ಎಚ್ಡಿಕೆ ಘೋಷಣೆ
ರಾಮನಗರ: 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ 30-35 ಕ್ಷೇತ್ರಕ್ಕೆ ಮಹಿಳೆಯರಿಗೆ ಟಿಕೆಟ್ ಮೀಸಲಿಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಂಘಟನಾ ಕಾರ್ಯಾಗಾರದ ಮೂರನೇ ದಿನವಾದ ಇಂದು(ಬುಧವಾರ) ಜೆಡಿಎಸ್ ಮಹಿಳಾ ಘಟಕದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟನ್ನು ಮಹಿಳೆಯರಿಗೆ ಕೊಡ್ತೀವಿ. ಬಿಜೆಪಿ ಮತ್ತು ಕಾಂಗ್ರೆಸ್ಗೆ ಹೋಲಿಸಿದಲ್ಲಿ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನ ಸರಿ ಮಾಡೋ ಕೆಲಸ ಮಾಡ್ತೀವಿ. ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಈ ಕಾರ್ಯಾಗಾರದಿಂದಲೇ ಪ್ರಾರಂಭ ಮಾಡ್ತೀವಿ. ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಟಾಸ್ಕ್ ಕೊಡ್ತೀವಿ ಎಂದರು. ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನ ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತೆ ಎಂದರು.
ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಡಬೇಕು ಅಂತ ದೇವೇಗೌಡರು ಧ್ವನಿ ಎತ್ತಿದ್ದರು. ಆದ್ರೆ ಕಾಂಗ್ರೆಸ್- ಬಿಜೆಪಿ ಸರ್ಕಾರ ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾಡ್ತೀವಿ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ ಶೇ.33 ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.