185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಜ್ಜು: ಯಶವಂತ್ ವಿ. ಗುರುಕರ್
ರಾಮನಗರ: 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ನ. 23ರ ಶನಿವಾರ ರಾಮನಗರದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದರು.
ಅವರು ನ.21ರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಅಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಬೆಳಿಗ್ಗೆ 6.45ಕ್ಕೆ ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಗುವುದು. 7.30ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭಿಸಲಾಗುವುದು, ಬೆಳಿಗ್ಗೆ 8 ಗಂಟೆಗೆ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ, ಒಟ್ಟಾರೆ 20 ಸುತ್ತುಗಳಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಇನ್ನೆರಡು ಕೊಠಡಿಗಳಲ್ಲಿ ಇವಿಎಂ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ, 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,06,886 (ಶೇ.88.81) ಮತಗಳು ಚಲಾವಣೆಗೊಂಡಿದೆ. 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿಯೊಂದು ಟೇಬಲ್‌ಗಳಿಗೂ ಎರಡು ರಾಜಕೀಯ ಪಕ್ಷದ ಏಜೆಂಟರುಗಳಿಗೆ ಪಾಸ್ ನೀಡಲಾಗಿದೆ. ಪಕ್ಷೇತರದ ಏಜೆಂಟರುಗಳಿಗೂ ಸಹ ಪಾಸ್‌ಗಳನ್ನು ನೀಡಲಾಗಿದೆ. ಟೇಬಲ್‌ವೈಸ್ ರಾಂಡಮ್ ಆಗಿ 27 ಜನರಿಗೆ ಪಾಸ್‌ಗಳನ್ನು ನೀಡಲಾಗಿದೆ ಎಂದರು.
ಮತ ಎಣಿಕೆಗೆ 69 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಜನ ಏಜೆಂಟರುಗಳು ಇರುತ್ತಾರೆ. ಬಿಗಿಯಾದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ, ಅಂದು ಜಿಲ್ಲೆಯಾದ್ಯಂತ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿನೋಯ್ ಗೋಷ್ಠಿಯಲ್ಲಿದ್ದರು.