15 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ
ಕರ್ನಾಟಕ ಸರ್ಕಾರ ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೃಷಿ ಪ್ರೋತ್ಸಾಹಿಸಲು ವಿಶೇಷ ಆದ್ಯತೆ ನೀಡಿ, ರೇಷ್ಮೆ ಕೈಗಾರಿಕೆಗಳ ಸ್ಥಾಪನೆಗೆ ಮುತುವರ್ಜಿ ವಹಿಸಿದೆ” ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ವಿಶ್ವನಾಥ ಅಮರಶೆಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರೇಷ್ಮೆ ಇಲಾಖೆ ಹಾಗೂ ರೇಷ್ಮೆ ಮಾರಾಟ ಮಂಡಳಿಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. “ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತದೆ” ಎಂದರು.
“ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕೂನಬೇವು ಗ್ರಾಮದ ಬಳಿ ಸುಮಾರು 5 ಎಕರೆ ಪ್ರದೇಶದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಲಿದೆ” ಎಂದು ಸವಿತಾ ವಿಶ್ವನಾಥ ಅಮರಶೆಟ್ಟಿ ತಿಳಿಸಿದರು.
“ರೇಷ್ಮೆ ಕೃಷಿ ಕೈಗೊಂಡಿರುವ ರೈತರಿಗೆ ಆರ್ಥಿಕ ಭದ್ರತೆಯನ್ನು ಸರ್ಕಾರ ಒದಗಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೃಷಿ ಪ್ರೋತ್ಸಾಹಿಸಲು ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಎಲ್ಲ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಪ್ರಯೋಗಾಲಯ ಸ್ಥಾಪಿಸಿ ಗುಣಮಟ್ಟದ ತಪಾಸಣೆಗೆ ಕ್ರಮವಹಿಸಲಾಗಿದೆ” ಎಂದು ವಿವರಣೆ ನೀಡಿದರು.
ಉತ್ತರ ಕರ್ನಾಟಕದಲ್ಲಿ ರೇಷ್ಮೆ ಬೆಳಗಾರರು
ಸವಿತಾ ವಿಶ್ವನಾಥ ಅಮರಶೆಟ್ಟಿ ಮಾತನಾಡಿ, ‘ಹಾವೇರಿ ಜಿಲ್ಲೆಯು ಉತ್ತರ ಕರ್ನಾಟಕದಲ್ಲಿಯೇ ಹೆಚ್ಚು ಅಂದರೆ ಸುಮಾರು 2500 ರೇಷ್ಮೆ ಬೆಳೆಗಾರರನ್ನು ಹೊಂದಿದೆ. ಭೂಮಿಯ ಗುಣ, ಹವಾಮಾನ ಕಾರಣಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಕೃಷಿಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ’ ಎಂದರು.
‘ಸರ್ಕಾರದ ಪ್ರೋತ್ಸಾಹಕ ಯೋಜನೆಗಳು ಹಾಗೂ ಸುತ್ತಲಿನ ರೈತರ ಯಶೋಗಾಥೆಗಳನ್ನು ಖುದ್ದಾಗಿ ಕಂಡ ನಂತರ ಇದೀಗ ಕೃಷಿಕರು ರೇಷ್ಮೆಯೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 83 ಗ್ರಾಮಗಳಲ್ಲಿ 228 ರೈತರು 413 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೇಸಾಯ ಮಾಡುತ್ತಿದ್ದಾರೆ’ ಎಂದು ಹೇಳಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಘೋಷಣೆ
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಣೆಬೆನ್ನೂರು ತಾಲೂಕು ಕೂನಬೇವು ಗ್ರಾಮದಲ್ಲಿ 5 ಎಕರೆ ಪ್ರದೇಶಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪನೆ ಘೋಷಿಸಿದ್ದಾರೆ. ಭೂಮಿ ಹಸ್ತಾಂತರವಾಗಿದ್ದು ಶೀಘ್ರದಲ್ಲಿಯೇ ನಬಾರ್ಡ್ ನೆರವಿನೊಂದಿಗೆ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಹಾವೇರಿ ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ 1331 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಆಗಿದೆ. ರೇಷ್ಮೆ ಕೃಷಿ ಮಾಡುವ ರೈತರ ಸಂಖ್ಯೆ ಹೆಚ್ಚಳವಾಗುತ್ತಿದೆ’ ಎಂದು ಸವಿತಾ ವಿಶ್ವನಾಥ ಅಮರಶೆಟ್ಟಿ ಹೇಳಿದರು.
ಧಾರವಾಡದ ರೇಷ್ಮೆ ತರಬೇತಿ ಸಂಸ್ಥೆ
‘ಧಾರವಾಡದ ರಾಯಾಪೂರದಲ್ಲಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಕೃಷಿಕರಿಗೆ ಕ್ಷೇತ್ರ ತರಬೇತಿ, ಮಹಿಳೆಯರಿಗೆ ಕರಕುಶಲ ತರಬೇತಿ ಹಾಗೂ ಕೇಂದ್ರ ರೇಷ್ಮೆ ಮಂಡಳಿಯು ನೂಲು ಬಿಚ್ಚಾಣಿಕೆದಾರರಿಗೆ ತರಬೇತಿ ನೀಡುತ್ತಿದೆ. ಧಾರವಾಡ ಹಾಗೂ ಸುತ್ತಲಿನ 9 ಜಿಲ್ಲೆಗಳ ವ್ಯಾಪ್ತಿಯನ್ನು ಈ ಕೇಂದ್ರ ಹೊಂದಿದೆ. ಉಪ್ಪಿನ ಬೆಟಗೇರಿ, ಮತ್ತಿಕಟ್ಟಿ ಮೊದಲಾದ ಗ್ರಾಮಗಳಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ’ ಎಂದು ಸವಿತಾ ಅಮರಶೆಟ್ಟಿ ವಿವರಣೆ ನೀಡಿದರು.
17 ವರ್ಷಗಳಿಂದ ರೇಷ್ಮೆ ಕೃಷಿ
ಚಿಕ್ಕಮಲ್ಲಿಗವಾಡದ ರೇಷ್ಮೆ ಬೆಳೆಗಾರ ಬಸವರಾಜ ಹುಚ್ಚಯ್ಯನವರ ಮಾತನಾಡಿ, ‘ಕಳೆದ 17 ವರ್ಷಗಳಿಂದ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಆದಾಯ ಬರುತ್ತಿದೆ. ಕಡಿಮೆ ಕೃಷಿಭೂಮಿಯಲ್ಲಿ ರೇಷ್ಮೆ ಕೃಷಿ ಮಾಡಿ ಸ್ವಾವಲಂಬಿಯಾಗಿ ಬದುಕಬಹುದು. ರೇಷ್ಮೆ ಬೀಜ ಉತ್ಪಾದನೆ ಮಾಡಿ ನಿಖರ ಆದಾಯ ಪಡೆದಿದ್ದೇನೆ. ಇದೀಗ ರೇಷ್ಮೆ ಹುಳುವಿನ ಮೊಟ್ಟೆಗಳ ಉತ್ಪಾದನೆ ಮಾಡುವ ಪ್ರಯತ್ನದಲ್ಲಿ ತೊಡಗಿದ್ದೇನೆ. ಯುವಕರು ರೇಷ್ಮೆ ಕೃಷಿಗೆ ಮುಂದಾಗಬೇಕು’ ಎಂದು ಕರೆ ನೀಡಿದರು.