shikshana

10, 12ನೇ ತರಗತಿ ಪರೀಕ್ಷೆ ಫಲಿತಾಂಶದ ದಾಖಲಾತಿಗೆ ಬ್ಲಾಕ್‌ಚೈನ್ ಲಭ್ಯ: ಸಿಬಿಎಸ್‌ಇ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ನಕಲಿ ಅಂಕಪಟ್ಟಿ ಮತ್ತು ನಕಲಿ ಶೈಕ್ಷಣಿಕ ದಾಖಲಾತಿಗಳ ಸೃಷ್ಟಿಗೆ ಅವಕಾಶವಾಗದಂತೆ 10, 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳ ದಾಖಲಾತಿಗಳಿಗಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಲಿದೆ.

ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಫಲಿತಾಂಶದ ಪ್ರಮಾಣಪತ್ರಗಳನ್ನು ಲಿಂಕ್ ಮಾಡಿದ ಚೈನ್ ರಚನೆಯಲ್ಲಿ ದಾಖಲಿಸಲು ಮತ್ತು ಶೈಕ್ಷಣಿಕ ದಾಖಲಾತಿಗಳನ್ನು ಕಾಗದ ರಹಿತವಾಗಿ ಒದಗಿಸುವ ವ್ಯವಸ್ಥೆಯನ್ನು ಈ ಬಾರಿಯಿಂದ ಜಾರಿಗೆ ತಂದಿದೆ.

ಸಿಬಿಎಸ್‌ಇ ಅಧಿಕಾರಿಗಳ ಪ್ರಕಾರ, ಈ ಪ್ರಮಾಣ ಪತ್ರಗಳನ್ನು ಯಾವುದೇ ರೀತಿಯಲ್ಲೂ ನಕಲು ಮಾಡಲು ಸಾಧ್ಯವಿಲ್ಲ. ಬ್ಲಾಕ್‌ಚೈನ್ ತಂತ್ರಜ್ಞಾನವು ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತ ಮತ್ತು ನಕಲು ಮಾಡಲು ಆಗದ ರೀತಿಯಲ್ಲಿ ದಾಖಲಿಸುವುದನ್ನು ಖಾತ್ರಿಪಡಿಸುತ್ತದೆ. ಈ ದಾಖಲಾತಿಗಳು ಆನ್‌ಲೈನ್‌ನಲ್ಲಿ ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ಲಭ್ಯವಿರಲಿವೆ.

ಅಕಾಡೆಮಿಕ್ ಬ್ಲಾಕ್‌ಚೈನ್ ಡಾಕ್ಯುಮೆಂಟ್‌ಗಳನ್ನು ವಿವಿಧ ಶಿಕ್ಷಣ ಸಂಸ್ಥೆಗಳು ಉನ್ನತ ವ್ಯಾಸಂಗಕ್ಕೆ ಪ್ರವೇಶ ನೀಡುವ ಸಮಯದಲ್ಲಿ ಪರಿಶೀಲನೆಗಾಗಿ ಹಾಗೂ ಉದ್ಯೋಗಾವಕಾಶ ನೀಡುವಾಗ ಕಂಪನಿಗಳು ಬಳಸಬಹುದಾಗಿದೆ.

ಸಿಬಿಎಸ್‌ಇಯ ಶೈಕ್ಷಣಿಕ (ಬ್ಲಾಕ್‌ಚೈನ್) ದಾಖಲೆಗಳನ್ನು ಮತ್ತು ಪ್ರಮಾಣಪತ್ರಗಳನ್ನು ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಲಿಂಕ್ ಮಾಡಿದ ಚೈನ್ ರಚನೆಯಲ್ಲಿ ದಾಖಲಿಸಲಾಗುತ್ತದೆ. 2019-2021ನೇ ಸಾಲಿನ 10 ಮತ್ತು 12ನೇ ತರಗತಿಯ ಫಲಿತಾಂಶದ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರಗಳನ್ನು ಲಭ್ಯವಾಗುವಂತೆ ಸಿಬಿಎಸ್‌ಇಯು ಮಾಡಿದೆ. ಮುಂಬರುವ ತಿಂಗಳುಗಳಲ್ಲಿ ಹಿಂದಿನ ವರ್ಷಗಳ ಪ್ರಮಾಣಪತ್ರಗಳೂ ಲಭ್ಯವಾಗಲಿವೆ ಎಂದು ಸಿಬಿಎಸ್‌ಇ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸಿಬಿಎಸ್‌ಇ ಹೊಸ ಪ್ರಮಾಣಪತ್ರಗಳನ್ನು ನೀಡಿದ ನಂತರ, ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರಗಳನ್ನು ಹೆಚ್ಚುವರಿ ಸುರಕ್ಷಿತ ಲಿಂಕ್ ರಚಿಸುವ ಬ್ಲಾಕ್‌ಚೈನ್ ಆಧಾರಿತ ವ್ಯವಸ್ಥೆಗೆ ರವಾನಿಸುತ್ತದೆ. ಬ್ಲಾಕ್‌ಚೈನ್‌ ಲಿಂಕ್‌ ನೆಟ್‌ವರ್ಕ್‌ ಅನ್ನು ಬೆಂಗಳೂರು, ಪುಣೆ ಮತ್ತು ಜೈಪುರದ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ, ಪ್ರಮಾಣಪತ್ರದ ಸರಪಳಿಯನ್ನು ಎನ್‌ಐಸಿ ತನ್ನ ಡೇಟಾ ಕೇಂದ್ರಗಳಲ್ಲಿ ನಿರ್ವಹಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button