ಹೊಸ ವರ್ಷಾಚರಣೆಗೆ ಹಲವು ನಿರ್ಬಂಧ; ಜನಸಂದಣಿ, ಡಿಜೆಗೆ ಅವಕಾಶ ಇಲ್ಲ
ಬೆಂಗಳೂರು, ಡಿ. 31: ಕೋವಿಡ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಹಲವು ನಿರ್ಬಂಧಗಳನ್ನ ಹಾಕಲಾಗಿದೆ. ಜನರು ಎಲ್ಲೂ ಗುಂಪುಗೂಡದಂತೆ ಕ್ರಮ ವಹಿಸಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ವರ್ಷಾಚರಣೆ ಆಚರಿಸುವ (New Year Celebrations) ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಹಾಗು ಸುತ್ತಮುತ್ತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಕಡೆ 380 ಸಿಸಿ ಕ್ಯಾಮೆರಾಗಳನ್ನ ಪೊಲೀಸರು ಅಳವಡಿಸಿದ್ದಾರೆ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ಎಂಜಿ ರಸ್ತೆಗಳಲ್ಲೇ 300 ಸಿಸಿಟಿವಿಗಳನ್ನ ಹಾಕಲಾಗಿದೆ.
ಬೆಂಗಳೂರಿನ ಯಾವುದೇ ಪಬ್ ಮತ್ತು ರೆಸ್ಟೋರೆಂಟ್ಗಳಲ್ಲಿ ಡಿಜೆ ಹಾಕುವುದಾಗಲೀ ಹೊಸ ವರ್ಷಾಚರಣೆಯಾಗಲೀ ಮಾಡದಂತೆ ಎಚ್ಚರ ವಹಿಸಲಾಗಿದೆ. ಪೊಲೀಸರು ಈಗಾಗಲೇ ಪಬ್ ಮಾಲೀಕರ ಜೊತೆ ಮಾತುಕತೆ ಮಾಡಿ ನಿರ್ದೇಶನ ನೀಡಿದ್ದಾರೆ. ಪಬ್ ರೆಸ್ಟೋರೆಂಟ್ಗಳು ಇರುವ ಪ್ರದೇಶಗಳಲ್ಲಿ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್ ಹಾಕುತ್ತಿದ್ದಾರೆ. ಇಲ್ಲಿ ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ ಕೊಡಲಾಗಿದೆ. ಹಾಗೆಯೇ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂಬ ಷರತ್ತೂ ಇದೆ.
ಬೆಂಗಳೂರಿನಲ್ಲಷ್ಟೇ ಅಲ್ಲ ರಾಜ್ಯದ ಯಾವ ಕಡೆಯೂ ಜನಸಂದಣಿಗೆ ಅವಕಾಶ ಇಲ್ಲ. ಜನರು ಹೊಸ ವರ್ಷಾಚರಣೆಯನ್ನ ಮನೆಯಲ್ಲೇ ಸರಳವಾಗಿ ಆಚರಿಸಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಕೋವಿಡ್ಗೆ ಮುನ್ನ ಬೆಂಗಳೂರಿನಲ್ಲಿ ಡಿ. 31ರ ಮಧ್ಯಾಹ್ನದಿಂದಲೇ ಎಂಜಿ ರಸ್ತೆ ಮೊದಲಾದ ಪ್ರದೇಶಗಳಲ್ಲಿ ಜನರು ಗುಂಪು ಸೇರಲು ಆರಂಭಿಸುತ್ತಿದ್ದರು. ಸಂಜೆಯ ವೇಳೆಗೆ ಹಲವು ರಸ್ತೆಗಳಲ್ಲಿ ಡಿಜೆ ಇತ್ಯಾದಿ ಕಾರ್ಯಕ್ರಮಗಳು ಝಗಮಗಿಸುವಂತೆ ನಡೆಯುತ್ತಿದ್ದವು. ಅನೇಕ ಪಬ್ ಅಂಡ್ ರೆಸ್ಟೋರೆಂಟ್ಗಳು ಸಂಜೆಯಿಂದಲೇ ಭರ್ತಿ ಆಗುತ್ತಿದ್ದವು. ಆದರೆ, ಇಂದು ಈ ಎಲ್ಲಾ ಪ್ರದೇಶಗಳು ಬಹುತೇಕ ಬಿಕೋ ಎನ್ನುತ್ತಿವೆ. ಪೊಲೀಸರು ಬಹುತೇಕ ಕಡೆ ಬ್ಯಾರಿಕೇಡ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯ ನಂತರ ಖಾಕಿಪಡೆ ಬಹಳ ನಿಗಾ ಇಟ್ಟು ಕಟ್ಟೆಚ್ಚರ ವಹಿಸುತ್ತಿದೆ.
ರಾತ್ರಿ ಹತ್ತು ಗಂಟೆಯವರೆಗೆ ಮಾತ್ರ ಪಬ್, ರೆಸ್ಟೋರೆಂಟ್ಗಳ ಕಾರ್ಯನಿರ್ವಹಣೆಗೆ ಅವಕಾಶ ಇದೆ. ಅವಧಿಮೀರಿ ತೆರೆದರೆ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧವಾಗಿದ್ದಾರೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್ಗಳ ಮುಂದೆ ಬೆಳಕಿನ ವ್ಯವಸ್ಥೆ ಸರಿಯಾಗಿ ಇರಬೇಕು. ಒಳಗೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಪಬ್, ರೆಸ್ಟೋರೆಂಟ್ಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ.
ಟ್ರಿನಿಟಿ ಸರ್ಕಲ್ನಿಂದ ಅನಿಲ್ ಕುಂಬ್ಳೆ ಸರ್ಕಲ್ವರೆಗೂ ವಿವಿಧ ರಸ್ತೆಗಳಲ್ಲಿ ಸಂಚಾರವನ್ನು ಪೊಲೀಸರು ಬ್ಯಾರಿಕೇಡ್ಗಳಿಂದ ಮುಚ್ಚುತ್ತಿದ್ದಾರೆ. ಬ್ರಿಗೇಡ್ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇಲ್ಲಿ ವಾಹನಗಳ ಸಂಚಾರಕ್ಕೆ ಎರಡು ಪಥ ಮಾಡಲಾಗಿದೆ. ಪಾದಚಾರಿಗಳು ಓಡಾಡಲು ಫುಟ್ಪಾತ್ ಮಾತ್ರ ಬಳಕೆ ಮಾಡಲು ಅವಕಾಶ ಕೊಡಲಾಗಿದೆ.