ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಕ್ಯಾಪ್ಟನ್ ಅಮರೀಂದರ್ (Captain Amarinder) ನಾನಾ ಕಾರಣಗಳಿಗಾಗಿ ಕಳೆದ ತಿಂಗಳು ಸಿಎಂ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದರು. ಅವರ ಸ್ಥಾನಕ್ಕೆ ದಲಿತ ನಾಯಕರಾದ ಚರಣಜೀತ್ ಸಿಂಗ್ ಚೆನ್ನಿ (Charanjit Singh Channi) ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಘಟನೆಯಿಂದ ಮನನೊಂದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ (Congress) ಪಕ್ಷದಿಂದಲೇ ಹೊರ ನಡೆದಿದ್ದರು.
ಅಲ್ಲದೆ, ಹೊಸ ಪಕ್ಷವನ್ನು ಸ್ಥಾಪಿಸುವುದಾಗಿಯೂ ತಿಳಿಸಿದ್ದರು. ಅದರಂತೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮಂಗಳವಾರ ತಮ್ಮ ಸ್ವಂತ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ, “2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ತಾನು ಬಿಜೆಪಿಯೊಂದಿಗೆ (BJP) ಮೈತ್ರಿ ಮಾಡಿಕೊಳ್ಳಲು ಮುಕ್ತನಾಗಿದ್ದೇನೆ” ಎಂದು ಘೋಷಿಸಿದ್ದಾರೆ.
ಅಮರೀಂದರ್ ಹೊಸ ಪಕ್ಷದ ಘೋಷಣೆ:
ಅಮರೀಂದರ್ ಸಿಂಗ್ ಅವರ ಅವರ ರಾಜಕೀಯ ಸಲಹೆಗಾರ ರವೀನ್ ತುಕ್ರಾಲ್ ಟ್ವೀಟ್ ಮಾಡುವ ಮೂಲಕ ಹೊಸ ಸ್ಥಾಪನೆಯನ್ನು ಖಚಿತಪಡಿಸಿದ್ದು, “ಪಂಜಾಬ್ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಶೀಘ್ರದಲ್ಲೇ ಘೋಷಿಸುತ್ತೇನೆ” ಎಂದು ತಿಳಿಸಿದ್ದಾರೆ.