ಹೊಸೂರು ತನಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸರ್ಕಾರದ ಅನುಮೋದನೆ
ನಮ್ಮ ಮೆಟ್ರೋ ಹಂತ 2ರ ಅಡಿಯಲ್ಲಿ ನಿರ್ಮಿಸುತ್ತಿರುವ ರಾಷ್ಟ್ರೀಯ ವಿದ್ಯಾಲಯ ರಸ್ತೆ-ಬೊಮ್ಮಸಂದ್ರ ಮಾರ್ಗವನ್ನು ಹೊಸೂರಿಗೆ (ರೀಚ್ 5) ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.
ಕೃಷ್ಣಗಿರಿ ಸಂಸದ ಡಾ. ಎ.ಚೆಲ್ಲಕುಮಾರ್ ಮೆಟ್ರೋ ಮಾರ್ಗಕ್ಕೆ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಸರ್ಕಾರದ ಅನುಮೋದನೆ ದೊರೆತಿರುವುದು ಸಕಾರಾತ್ಮಕ ಬೆಳವಣಿಗೆ ಎಂದಿದ್ದಾರೆ. ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿರುವುದು ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಈ ಸಂಬಂಧ ತಮಿಳುನಾಡು ಸರ್ಕಾರದೊಂದಿದೆ ಶೀಘ್ರವೇ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮೇ 23 ರಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ಅನುಮೋದನೆ ಬಗ್ಗೆ ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರ ಬೊಮ್ಮಸಂದ್ರದಿಂದ ಹೊಸೂರು ನಡುವಿನ ಮಾರ್ಗದ ಕಾಮಗಾರಿ ಕುರಿತು ಅಧ್ಯಯನವನ್ನು ನಡೆಸಬಹುದೆಂದು ಗಮನಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ ಎಂದು ಪರ್ವೇಜ್ ಪತ್ರದಲ್ಲಿ ತಿಳಿಸಿದ್ದಾರೆ. 20.5 ಕಿ.ಮೀ. ಉದ್ದದ ಮಾರ್ಗ; ಹೊಸೂರುವರೆಗಿನ ನಮ್ಮ ಮೆಟ್ರೋ ಮಾರ್ಗದ ಉದ್ದ 20.5 ಕಿ.ಮೀ. ಎಂದು ಅಂದಾಜಿಸಲಾಗಿದೆ. ಅದರಲ್ಲಿ 11.7 ಕಿಮೀ ಕರ್ನಾಟಕದ ಗಡಿಯೊಳಗೆ ಬರುತ್ತದೆ. ರಾಜ್ಯದ ಗಡಿಗಳನ್ನು ಮೀರಿದ ಯೋಜನೆಗಳ ಕುರಿತು ಇರುವ ‘ಮೆಟ್ರೋ ರೈಲು ನೀತಿ 2017’ರ ಮಾರ್ಗಸೂಚಿಗಳ ಪ್ರಕಾರ ತಮಿಳುನಾಡು ಅಧ್ಯಯನ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ಈ ಕುರಿತು ಮಾತನಾಡಿರುವ ಕೃಷ್ಣಗಿರಿ ಸಂಸದ ಡಾ. ಎ.ಚೆಲ್ಲಕುಮಾರ್ ಈ ಕುರಿತು ಬಿಎಂಆರ್‌ಸಿಎಲ್ ಅಧ್ಯಯನ ಮಾಡಲು ಮನವಿ ಮಾಡುವುದಾಗಿ ತಿಳಿಸಿದರು. “ಚೆನ್ನೈ ಮೆಟ್ರೋ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಧ್ಯಯನ ನಡೆಸಲು ಬಿಎಂಆರ್‌ಸಿಎಲ್ ಉತ್ತಮ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯುತ್ತೇನೆ” ಎಂದು ಹೇಳಿದ್ದಾರೆ.
ಮುಖ್ಯವಾಗಿ ಮೆಟ್ರೋ ಮಾರ್ಗ ನಿರ್ಮಾಣದಲ್ಲಿ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಯೋಜನಾ ವೆಚ್ಚದ ಹಂಚಿಕೆ ಮತ್ತು ಕಾಮಗಾರಿ ಸಮಯದಲ್ಲಿ ಹಣಕಾಸಿನ ನೆರವು ವಿಚಾರದಲ್ಲಿ ಸಮನ್ವಯತೆ ಅಗತ್ಯವಿದೆ ಎಂದು ಬಿಎಂಆರ್‌ಸಿಎಲ್ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ
ಯೋಜನೆಗೆ ಅಗತ್ಯ ಮಂಜೂರಾತಿ ದೊರೆತ ಬಳಿಕ ಹಣಕಾಸು ಸಮಸ್ಯೆ ಬಗೆಹರಿಯಲಿದೆ ಎಂದು ಡಾ. ಎ. ಚೆಲ್ಲಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಲ್ಕು ಟರ್ಮಿನಲ್ ಪಾಯಿಂಟ್‌ಗಳನ್ನು ವಿಸ್ತರಿಸುವ ಮೂಲಕ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಯೊಂದಿಗೆ ಹೊಸೂರನ್ನು ಸಂಪರ್ಕಿಸಲು ರಾಜ್ಯ ಸರ್ಕಾರ ಈ ಹಿಂದೆ ಯೋಜಿಸಿತ್ತು. ಯೋಜನೆಯಡಿ ಹೀಲಳಿಗೆ ಮಾರ್ಗವನ್ನು ಹೊಸೂರು, ಕೆಂಗೇರಿಯಿಂದ ರಾಮನಗರ, ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರ ಮತ್ತು ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆವರೆಗೆ ವಿಸ್ತರಿಸಲು ಉದ್ದೇಶಿಸಿದೆ.