
ಹನೂರು : ಅರಣ್ಯ, ಅಬಕಾರಿ, ಪೊಲೀಸ್, ಗ್ರಾಮ ಪಂಚಾಯ್ತಿಗಳ ಸಹಕಾರ ಹಾಗೂ ಸಹಯೋಗದೊಂದಿಗೆ ಅಕ್ರಮ ಮದ್ಯದ ದಂಧೆ ನಡೆಸುವ ಮೂಲಕ, ಸಾಮಾನ್ಯವಾಗಿ ಗಾರ್ಡನ್ ಬಾರ್ ಹೆಸರು ಕೇಳಿರುತ್ತೀರಿ ಅದಕ್ಕೂ ಒಂದೆಜ್ಜೆ ಮುಂದೆ ಹೋಗಿ ನೀವು ಕೇಳಿಯೇ ಇರದ ಹೊಗೆನಕಲ್ ಜಲಪಾತವಿರುವ ಕಾವೇರಿ ನದಿಯನ್ನೇ ‘ರಿವರ್ ಬಾರ್’ ಮಾಡಿಕೊಂಡು ಕಾರು ಬಾರು ನಡೆಸುತ್ತಿದ್ದರೂ ಜಿ(ಇ)ಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ನಾಚಿಗೆಗೇಡಿನ ಸಂಗತಿಯೇ ಸರಿ.
ಇದು ಆಶ್ಚರ್ಯವೆನಿಸಿದರೂ ಸತ್ಯ..ರಾಜ್ಯದ ಗಡಿಯಂಚಿನಲ್ಲಿ ಬರುವ ಗೋಪಿನಾಥಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಸರಹದ್ದಿನ ಕಾವೇರಿ ವನ್ಯಜೀವಿ ವಿಭಾಗದ ಹಾಗೂ ಗೋಪಿನಾಥಂ ವನ್ಯಜೀವಿ ವಲಯಕ್ಕೆ ಸೇರಿದ ಪ್ರಸಿದ್ದ ಪ್ರವಾಸಿ ತಾಣ ಹೊಗೆನಕಲ್ ಜಲಪಾತವಿರುವ ಮಾರಿಕೊಟ್ಟಾಯಿ ಎಂಬ ನದಿ ತೀರದ ಗ್ರಾಮದಲ್ಲಿ ಮಾಂಸಾಹಾರೀ ಹೋಟೆಲ್ ನಡೆಸುತ್ತಿರುವ ಗ್ರಾ.ಪಂ.ಅಧ್ಯಕ್ಷೆಯೊಬ್ಬಳು ತನ್ನ ಹೋಟೆಲನ್ನೇ ಮಿನಿ ಬಾರ್ ಮಾಡಿಕೊಂಡು, ವಾರಾಂತ್ಯದಲ್ಲಿ ಮೋಜು ಮಸ್ತಿಗಾಗಿ ಈ ಭಾಗದಿಂದ ಜಲಪಾತಕ್ಕೆ ತೆರಳುವ ಹಾಗೂ ತಮಿಳುನಾಡು ಕಡೆಯಿಂದ ಈ ಭಾಗಕ್ಕೆ ಬರುವ ಮದ್ಯಪ್ರಿಯರನ್ನು ಗುರಿಯಾಗಿಸಿಕೊಂಡು ಮದ್ಯ ಸರಬರಾಜಿಗೆಂದೇ ತನ್ನ ಪುತ್ರ ಸೇರಿದಂತೆ ನಾಲ್ಕಾರು ಯುವಕರುಗಳನ್ನು ನೇಮಿಸಿಕೊಂಡಿರುವ ಈಕೆ ಇವರುಗಳ ಮೂಲಕ ತೆಪ್ಪ ಏರುತ್ತಿದ್ದಂತೆ ಆಕಡೆಯಿಂದ ತೆಪ್ಪದಲ್ಲಿ ಬರುತ್ತಿದ್ದಂತೆ ಪ್ರವಾಸಿಗರಿಗೆ ಯಾವುದೇ ಪ್ರಯಾಸವಿಲ್ಲದಂತೆ ದುಪ್ಪಟು ಬೆಲೆಗೆ ಬಿಯರ್, ಬ್ರಾಂದಿ , ವಿಸ್ಕಿ ಹೀಗೆ ಕೇಳಿದ ಬ್ರ್ಯಾಂಡ್ ಗುಂಡಿನೊಂದಿಗೆ ನೆಂಚಿಕೊಳ್ಳಲು ಮೀನಿನ ತುಂಡು ಹೀಗೆ ಕೇಳಿದ ಮದ್ಯವನ್ನು ಅಲ್ಲಿಗೆ ಸರಬರಾಜು ಮಾಡುವ ಮೂಲಕ ತೆಪ್ಪವನ್ನೇ ತೇಲಾಡುವ ಬಾರ್ ಮಾಡಿರುವುದು ಜಗಜ್ಜಾಹೀರಾಗಿದೆ.
ಈಮಿನಿ ಬಾರ್ ಗೆ ಇಲ್ಲಿಂದ ಕೇವಲ 12 ಕಿ.ಮೀ ಸನಿಹದಲ್ಲೇ ಇರುವ ಗೋಪಿನಾಥಂನಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಒಬ್ಬರ ಬೇನಾಮಿ ಹೆಸರು ಹಾಗೂ ಸ್ಲೀಪಿಂಗ್ ಪಾರ್ಟನರ್ ಸಿಪ್ ನಲ್ಲಿ ನಡೆಸುತ್ತಿರುವ ಮದ್ಯದಂಗಡಿಯಿಂದ ರಾಜಾರೋಷವಾಗಿ ನೇರ ಮದ್ಯ ಸರಬರಾಗುತ್ತಿರುವುದು ಹಾಗೂ ಇದೇ ವೈನ್ ಸ್ಟೋರ್ ನಿಂದ ನದಿ ಮಾರ್ಗವಾಗಿ ತೆಪ್ಪಗಳ ಮೂಲಕ ಯಥೇಚ್ಛ ಪ್ರಮಾಣದಲ್ಲಿ ಕೇಸ್ ಗಟ್ಟಲೆ ಮದ್ಯದ ಬಾಕ್ಸ್ವಗಳು ನೆರೆಯ ತಮಿಳುನಾಡಿಗೆ ಕಳ್ಳ ಸಾಗಣೆಯಾಗುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಕೆಲ ವರ್ಷಗಳ ಹಿಂದೆ ಇದೇ ವೈನ್ಸ್ ಸ್ಟೋರ್ ನಿಂದ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಸುಮಾರು 30 ರಷ್ಟು ಮದ್ಯದ ಬಾಕ್ಸ್ ಗಳನ್ನು ತಮಿಳುನಾಡು ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು ಇಲ್ಲಿನ ಅಬಕಾರಿ ಇಲಾಖೆಯವರು ಈ ವೈನ್ ಸ್ಟೋರ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಮಾಲೀಕರಿಗೆ ಅಬಾರಿಯಾಗಿದ್ದು ಇತಿಹಾಸ.
ಗೋಪಿನಾಥಂನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಮ.ಬೆಟ್ಟ ಪೊಲೀಸ್ ಠಾಣೆ ವತಿಯಿಂದ ಇಲ್ಲಿ ಉಪ ಪೊಲೀಸ್ ಠಾಣೆಯನ್ನು ತೆರೆದಿದ್ದು ಒಬ್ಬರು ಮುಖ್ಯಪೇದೆ ಹಾಗೂ ಇಬ್ಬರು ಪೇದೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದು ಅವರೂ ಸಹ ದನದಾಹದಿಂದ ಮದ್ಯ ದಂಧೆಯವರ ದಾಸರಾಗಿದ್ದು ಕರ್ತವ್ಯಕ್ಕೆ ದ್ರೋಹವೆಸಗಿರುವುದರಿಂದ ಈದಂಧೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಿರಾತಂಕವಾಗಿ ಸಾಗಿದೆ.
ಹೊಗೆನಕಲ್ ಜಲಪಾತದ ಆಸು ಪಾಸು ಪ್ರದೇಶ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದ್ದು ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧವಿದ್ದರೂ ತೆಪ್ಪಗಳ ನಿರ್ವಹಣೆ ಹಾಗೂ ಪ್ರವಾಸಿಗರ ಸಂಪೂರ್ಣ ಹೊಣೆ ಅರಣ್ಯ ಇಲಾಖೆಯವರಿಗೇ ಸೇರಿದ್ದರೂ ಕೂಡ ಇವರುಗಳು ಸಹ ಮದ್ಯದಂಧೆಯವರು ನೀಡುವ ಎಂಜಲು ಕಾಸಿಗೆ ಕೈಯೊಡ್ಡಿ ಗುಲಾಮರಾಗಿರುವುದರಿಂದ ಕಮಕ್ ಕಿಮಕ್ ಎನ್ನದೆ ಕಾವೇರಿ ನದಿಯಲ್ಲಿ ತೇಲುವ ತೆಪ್ಪಗಳಲ್ಲೇ ರಿವರ್ ಬಾರ್ ನಡೆಸಲು ಸಂಪೂರ್ಣ ಸಹಕಾರ ನೀಡಿರುವುದಾಗಿ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಪ್ರಬುದ್ದ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ಯಪ್ರಿಯರು ಕುಡಿದ ಅಮಲಿನಲ್ಲಿ ತೇಲುವ ತೆಪ್ಪದ ಮೇಲೆ ನಡೆಸುವವನಿಗೂ ಮದ್ಯ ಕುಡಿಸಿ ತೆಪ್ಪವನ್ನು ಹೇಗೆಂದರೆ ಹಾಗೆ ಗಿರಗಿರನೆ ತಿರುಗಿಸಿ ಹುಚ್ಚಾ ಬಟ್ಟೆ ಕುಣಿಯುವುದು ಸರ್ವೆ ಸಾಮಾನ್ಯವಾಗಿದ್ದು ತೆಪ್ಪ ಮಗುಚಿ ಸಾವು ನೋವುಗಳು ಸಂಭವಿಸಿದರೆ ಯಾರು ಹೊಣೆ..? ಕುಡುಕರು ಕಾಲಿ ಬಾಟಲಿ ಹಾಗೂ ಪೌಚ್ ಸೇರಿದಂತೆ ಬಿಸಾಡುವ ತ್ಯಾಜ್ಯಗಳಿಂದ ಜಲಚರ ಸಂಕುಲಕ್ಕೆ ಸಂಚಕಾರ ಒದಗಲಿರುವುದನ್ನು ತಳ್ಳಿ ಹಾಕುವಂತಿಲ್ಲ.
ಅಕ್ರಮ ಮದ್ಯ ಸಾಗಣೆಯನ್ನು ನಿಯಂತ್ರಿಸಿ ಮಾದರಿಯಾಗಬೇಕಾದ ಪಂಚಾಯ್ತಿಯವರೇ ಮಾರಿಯಾಗಿ ಪರಿಣಮಿಸಿ ಅಕ್ರಮ ಮದ್ಯ ದಂಧೆಗೆ ಹಸಿರು ನಿಶಾನೆ ನೀಡಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಕೂಡಲೇ ಸಂಬಂಧಿಸಿದ ಜಿಲ್ಲಾ ಪಂಚಾಯತಿ, ಹತ್ತಾರು ವರ್ಷಗಳಿಂದ ಒಂದೆಡೆಯೇ ಬೇರು ಬಿಟ್ಟು ಬಿಲ್ ಕಲೆಕ್ಟರ್ ಹುದ್ದೆಯಿಂದ ಆರಂಭಗೊಂಡು ಇದೀಗ ಪಿಡಿಓ ಹುದ್ದೆ ಅಲಂಕರಿಸಿರುವ ಸ್ಥಳೀಯ ನಿವಾಸಿ ಹಾಗೂ ವೈನ್ ಸ್ಟೋರ್ ಸ್ಲೀಪಿಂಗ್ ಪಾರ್ಟನರ್ ಆಗಿರುವ ಪಿಡಿಓ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೂಡಲೇ ಅಮಾನತುಗೊಳಿಸಿ ಅನ್ಯ ಕಡೆಗೆ ವರ್ಗಾಯಿಸುವಂತೆಯೂ ಹಾಗೆಯೇ ಅಕ್ರಮ ಮದ್ಯ ದಂಧೆಯಲ್ಲಿ ತೊಡಗಿರುವ ಗ್ರಾ.ಪಂ.ಅಧ್ಯಕ್ಷೆಯನ್ನು ಸಹ ಸದಸ್ಯತ್ವದಿಂದ ವಜಾಗೊಳಿಸಿ ಮನೆಗೆ ಅಟ್ಟುವಂತೆ ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.