ಭಾರತ ತಂಡ ಈ ಭಾರಿ ಟಿ20 ವಶ್ವಕಪ್ (T20 World Cup 2021 ) ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನೂ ರೂಪಿಸಿದೆ. ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಟಿ20 ಪಂದ್ಯ ಆಡುವ ಮೂಲಕ ಭಾರತ ವಿಶ್ವಕಪ್ ಟಿ20 ಅಭಿಯಾನವನ್ನು ಆರಂಭಿಸಲಿದೆ. ಆದರೆ, ಪಾಕ್ (India Vs Pakistan) ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಹೆಚ್ಚುವರಿ ಸೀಮರ್ ಅಥವಾ ಸ್ಪಿನ್ನರ್ ಜೊತೆ ಹೋಗುವುದೇ ಎಂಬ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿದೆ.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ (Ravi Shastri), “ಟೀಂ ಇಂಡಿಯಾ ಪಾಕ್ ವಿರುದ್ಧ ಹೆಚ್ಚುವರಿ ಸೀಮರ್ ಅಥವಾ ಸ್ಪಿನ್ ಬೌಲರ್ ಜೊತೆ ಕಣಕ್ಕಿಳಿಯುವ ವಿಚಾರವನ್ನು ಡ್ಯೂ ಫ್ಯಾಕ್ಟರ್ (Dew Factor) ನಿರ್ಧರಿಸುತ್ತದೆ” ಎಂದು ತಿಳಿಸಿದ್ದಾರೆ.
ರವಿ ಶಾಸ್ತ್ರಿ ವಿಶ್ವಕಪ್ ನಂತರ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಹೀಗಾಗಿ ಇದು ಅವರ ಕೊನೆಯ ಮತ್ತು ಮಹತ್ವದ ವಿಶ್ವಕಪ್ ಟೂರ್ನಿ. ಹೀಗಾಗಿ ಈ ಟೂರ್ನಿಯಲ್ಲಿ ಪ್ರಶಸ್ತಿಯೊಂದಿಗೆ ವಿದಾಯ ಹೇಳಬೇಕಾದ ಅನಿವಾರ್ಯತೆ ರವಿ ಶಾಸ್ತ್ರಿಗೂ ಇದೆ. ಈ ಬಗ್ಗೆಯೂ ಮಾತನಾಡಿರುವ ರವಿ ಶಾಸ್ತ್ರಿ, “ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಎರಡು ಮಹತ್ವದ ತರಬೇತಿ ಪಂದ್ಯಗಳನ್ನು ಆಡಲಿದ್ದು, ಆಟಗಾರರ ಫಾರ್ಮ್ ಅನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರ ಲಯಕ್ಕೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಲು ಸಹಕಾರಿಯಾಗಿರುತ್ತದೆ” ಎಂದು ತಿಳಿಸಿದ್ದಾರೆ.