ಹುಟ್ಟುವ ಮಗುವಿನ ಜಾತಿಗಾಗಿ ಗರ್ಭಿಣಿ ಮಡದಿಯನ್ನ ಉಸಿರುಗಟ್ಟಿಸಿ ಕೊಂದ!
ಮೈಸೂರು ನಗರದ ಬಿಳಿಕೆರೆ ಬಳಿ ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆಯಾಗಿತ್ತು. ಇದೀಗ ಪೊಲೀಸರು ಪ್ರಕರಣದ ಆರೋಪಿ ಮಹಿಳೆಯ ಪತಿ ಪ್ರಮೋದ್ ನನ್ನು ಬಂಧಿಸಿದ್ದಾರೆ. ಬಂಧಿತ ಪ್ರಮೋದ್ ತಾನೇ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿ, ಕೆರೆಯ ಬಳಿ ಶವ ಎಸೆದಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. 23 ವರ್ಷದ ಅಶ್ವಿನಿ ಕೊಲೆಯಾದ ಮಹಿಳೆ. ಅಶ್ವಿನಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಮೈಸೂರು ತಾಲೂಕಿನ ಪ್ರಮೋದ್ ಖಾಸಗಿ ವಾಹನದ ಚಾಲಕನಾಗಿದ್ದನು. ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿತ್ತು. ಇಬ್ಬರ ಜಾತಿ ಬೇರೆಯಾಗಿದ್ರೂ ಕುಟುಂಬಸ್ಥರನ್ನು ಒಪ್ಪಿಸಿ ಪ್ರಮೋದ್ ಮತ್ತು ಆಶ್ವಿನಿ ಜೂನ್ 13,2021ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
ಅಶ್ವಿನಿ ಗರ್ಭಿಣಿಯಾದ ವಿಷಯ ತಿಳಯುತ್ತಲೇ ಪ್ರಮೋದ್ ಹುಟ್ಟು ಮಗುವಿಗೆ ಯಾವ ಜಾತಿ ಇರಿಸಬೇಕೆಂದು ವಾದ ಆರಂಭಿಸಿದ್ದನು. ಈ ಸಂಬಂಧ ದಂಪತಿ ನಡುವೆ ಸಾಕಷ್ಟು ವಾದ-ವಿವಾದ ನಡೆದಿದೆ. ಜಾತಿ ಕಾರಣದಿಂದಾಗಿ ಅಶ್ವಿನಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಪ್ರಮೋದ್ ಒತ್ತಡ ಹಾಕಲಾರಂಭಿಸಿದ್ದನು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಜಗಳ ವಿಕೋಪಕ್ಕೆ ಹೋದಾಗ ಕುಟುಂಬದ ಹಿರಿಯರು ರಾಜಿ ಪಂಚಾಯ್ತಿ ಮಾಡಿದ್ದರು. ಇದಾದ ಬಳಿಕ ಪತಿಯ ಮೇಲೆ ಮುನಿಸಿಕೊಂಡ ಏಳು ತಿಂಗಳ ಗರ್ಭಿಣಿ ತವರು ಸೇರಿದ್ದರು.
ಮನೆಗೆ ಬಂದು ಅಶ್ವಿನಿಯನ್ನ ಕರೆದುಕೊಂಡು ಹೋದ
ಭಾನುವಾರ ಮಧ್ಯಾಹ್ನ ಪತ್ನಿ ಮನೆಗೆ ಬಂದಿದ್ದನು. ಕೆಲ ಸಮಯದ ಬಳಿಕ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದನು. ಮಧ್ಯಾಹ್ನ ಹೋದ ಮಗಳು ರಾತ್ರಿಯಾದರೂ ಬರದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಅಶ್ವಿನಿಗೆ ಫೋನ್ ಮಾಡಿದ್ದಾರೆ. ಆದ್ರೆ ಅಶ್ವಿನಿ ಕಾಲ್ ರಿಸೀವ್ ಮಾಡಿರಲಿಲ್ಲ. ಮಗಳು ಕಾಲ್ ರಿಸೀವ್ ಮಾಡದ ಹಿನ್ನೆಲೆ ಅಳಿಯನಿಗೂ ಅಶ್ವಿನಿ ಪೋಷಕರು ಕರೆ ಮಾಡಿದ್ದಾರೆ. ಆದ್ರೆ ಪ್ರಮೋದ್ ಸಹ ಕಾಲ್ ರಿಸೀವ್ ಮಾಡಿಲ್ಲ.
ಅಶ್ವಿನಿ ಪೋಷಕರಿಂದ ದೂರು ದಾಖಲು
ಇಬ್ಬರು ಕಾಲ್ ರಿಸೀವ್ ಮಾಡದ ಹಿನ್ನೆಲೆ ಕುಟುಂಬಸ್ಥರು ರಾತ್ರಿಯೇ ಮಗಳನ್ನು ಹುಡುಕಾಡಲು ಆರಂಭಿಸಿದ್ದಾರೆ. ಜೊತೆಗೆ ಮಗಳು ನಾಪತ್ತೆಯಾಗಿರುವ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪ್ರಮೋದ್
ಸೋಮವಾರ ಕೆರೆಯ ಬಳಿ ಶವ ಪತ್ತೆಯಾಗಿರುವ ವಿಷಯ ತಿಳಿದು ಅಶ್ವಿನಿ ಪೋಷಕರು ದೌಡಾಯಿಸಿದ್ದಾರೆ. ಅದು ತಮ್ಮ ಮಗಳು ಅಶ್ವಿನಿ ಎಂದು ಗುರುತಿಸಿದ್ದಾರೆ. ನಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಮೋದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನೇ ಪತ್ನಿಯನ್ನು ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಪ್ರಮೋದ್ ಕುಟುಂಬಸ್ಥರ ಬಂಧನಕ್ಕೆ ಮುಂದಾಗಿದ್ದಾರೆ,