
ಹುಕ್ಕೇರಿ : ಒಂದು ವಾರದಿಂದ ಪಟ್ಟಣದ ಗಣೇಶ ನಗರ, ಕುಂಬಾರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ನಿವಾಸಿಗಳು ಕಂಗೆಟ್ಟಿದ್ದಾರೆ.ಪಟ್ಟಣಕ್ಕೆ ಹಿಡಕಲ್ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತದೆ. ನೀರು ಸಂಗ್ರಹಿಸಲು ಎರಡು ಟ್ಯಾಂಕ್‌ಗಳಿವೆ. ಆದರೆ, ಗುಣಮಟ್ಟದ ಪೈಪ್ ಅಳವಡಿಸದ ಕಾರಣ ಪೈಪ್ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.ಹಳ್ಳದಕೇರಿ, ಕುಂಬಾರ ಬಡಾವಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ ಸೇರಿದಂತೆ ಪಟ್ಟಣದ ಎತ್ತರದ ಪ್ರದೇಶಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಸಮಸ್ಯೆಯನ್ನು ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ ಅವರಿಗೆ ತಿಳಿಸಲಾಗಿದೆ. ಅಧಿಕಾರಿಗಳಿಗೆ ದೂರು ನೀಡೋಣ ಎಂದರೆ ಮುಖ್ಯಾಧಿಕಾರಿ ಸಿಗುತ್ತಿಲ್ಲ. ಹೀಗಾಗಿ ಖಾಸಗಿ ಕೊಳವೆ ಬಾವಿಯಿಂದ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಂಬಾರ ಓಣಿ ಪ್ರದೇಶಕ್ಕೆ ಎರಡು ತಿಂಗಳಿನಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಪರಿಹರಿಸಿಲ್ಲಎಂದು ಬಡಾವಣೆ ಮಹಿಳೆಯರಾದ ರತ್ನವ್ವಾ ಕುಂಬಾರ, ವಿಜಯಮಾಲಾ ಕುಂಬಾರ, ಮಹಾದೇವಿ ಕುಂಬಾರ ಹಾಗೂ ಇತರರು ಶುಕ್ರವಾರ ಪುರಸಭೆಗೆ ಆಗಮಿಸಿ, ಅಧ್ಯಕ್ಷ ಇಮ್ರಾನ ಮೋಮಿನ ಅವರನ್ನು ತರಾಟೆಗೆ ತೆಗೆದುಕೊಂಡರು.