ಇತ್ತೀಚಿನ ಸುದ್ದಿರಾಜ್ಯಸುದ್ದಿ

ಹಿಜಾಬ್ ಪ್ರಕರಣದ ತೀರ್ಪು ಹಿನ್ನೆಲೆ; ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ!

ಬೆಂಗಳೂರು: ಹಿಜಾಬ್ ವಿವಾದ ಆರಂಭವಾಗಿ ತಿಂಗಳೇ ಕಳೆಯಿತು. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ 6 ಮಂದಿ ಮುಸ್ಲಿಂ ವಿದ್ಯಾರ್ಥಿಗಳ ವಿಚಾರದಲ್ಲಿ ಶುರುವಾದ ಹಿಜಾಬ್ ಸಮಸ್ಯೆ ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿತ್ತು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ತಾವು ಕೇಸರಿ ಶಾಲು ಧರಿಸುವುದಾಗಿ ಇತ್ತ ಹಿಂದೂ ಸಮುದಾಯದ ಕೆಲ ಹುಡುಗರು ಪ್ರತಿಭಟನೆಗೆ ಇಳಿದರು. ಇದು ಶಾಲಾ- ಕಾಲೇಜು ವರ್ಗ ಹಾಗೂ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ರಾಜಕೀಯ ನಾಯಕರು, ಎರಡೂ ಸಮುದಾಯದ ಮುಖಂಡರ ಹೇಳಿಕೆ, ನಿಲುವುಗಳ ನಡುವೆ ವಿವಾದ ದೇಶಾದ್ಯಂತ ಸುದ್ದಿ ಮಾಡಿತು. ಅಷ್ಟೇ ಏಕೆ ವಿದೇಶಿ ಮಾಧ್ಯಮಗಳಲ್ಲಿ ಕೂಡ ಹಿಜಾಬ್- ಕೇಸರಿ ಶಾಲು ವಿವಾದ ಚರ್ಚೆಗೊಳಗಾಯಿತು.

ಹೀಗೆ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ವಿವಾದ, ಶಿವಮೊಗ್ಗ, ಮೈಸೂರು, ಬೀದರ್, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ತಾರಕಕ್ಕೇರಿತು. ಕೊನೆಗೆ ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತು. ಕೆಲವೆಡೆ ಶಾಲಾ ಕಾಲೇಜು ಆಡಳಿತ ಮಂಡಳಿ ಅನಿರ್ಧಿಷ್ಟಾವಧಿ ರಜೆಯನ್ನೂ ನೀಡಿತು. ಇಂತಹ ಪರಿಸ್ಥಿತಿಯಲ್ಲಿ ಜನವರಿ 31 ರಂದು ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಯಿತು. ಬಳಿಕ, ಫೆಬ್ರವರಿ 3 ರಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಫೆಬ್ರವರಿ 9 ರಂದು ಪ್ರಕರಣ ಪೂರ್ಣ ಪೀಠಕ್ಕೆ ವರ್ಗಾವಣೆ ಮಾಡಲಾಯಿತು.

ಫೆಬ್ರವರಿ 11 ರಂದು ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಬಳಿಕ 11 ದಿನಗಳ ಕಾಲ ಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆಸಲಾಯಿತು. ನಂತರ ಫೆಬ್ರವರಿ 25 ರಂದು ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್, ಇಂದು (ಮಾರ್ಚ್ 15) ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಲಿದೆ. ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ಸಮವಸ್ತ್ರದ ಜತೆ ಹಿಜಾಬ್​ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಇಂದು ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರಬೀಳಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರವರ ಪೂರ್ಣ ಪೀಠ ತೀರ್ಪು ನೀಡಲಿದೆ.

ಹಿಜಾಬ್ ಪ್ರಕರಣದ ತೀರ್ಪು ಹಿನ್ನೆಲೆ; ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ

ಹೈಕೋರ್ಟ್​ನಿಂದ ಇಂದು ಹಿಜಾಬ್ ಪ್ರಕರಣದ ತೀರ್ಪು ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ 10,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. 8 ಡಿಸಿಪಿಗಳು, 40 ಎಸಿಪಿಗಳು, 120 ಇನ್ಸ್‌ಪೆಕ್ಟರ್‌ಗಳು, 40 ಕೆಎಸ್‌ಆರ್‌ಪಿ, 30 ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಹೈಕೋರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಇರಲಿದೆ. ಮೂವರು ಎಸಿಪಿಗಳು, 8 ಇನ್ಸ್‌ಪೆಕ್ಟರ್‌ಗಳ ನಿಯೋಜನೆ ಮಾಡಲಾಗಿದೆ.

ವಿವಿಧ ಜಿಲ್ಲೆಗಳಲ್ಲಿ ಸೆಕ್ಷನ್ ಜಾರಿ

ಮೈಸೂರು, ಕೊಪ್ಪಳ, ಕೋಲಾರ, ರಾಯಚೂರು, ರಾಮನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಮಂಗಳೂರು, ಬಾಗಲಕೋಟೆ, ಬೆಳಗಾವಿ, ಮಡಿಕೇರಿ, ವಿಜಯಪುರ, ಯಾದಗಿರಿ, ಕಾರವಾರ, ಹುಬ್ಬಳ್ಳಿ, ಚಿತ್ರದುರ್ಗ, ತುಮಕೂರು, ಗದಗ, ಬೀದರ್, ರಾಮನಗರ ಸಹಿತ ಮುಂತಾದೆಡೆ ಸೆಕ್ಷನ್ ಜಾರಿ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ 1, 2 ಹಾಗೂ ಕೆಲವೆಡೆ 6 ದಿನಗಳ ಕಾಲ ಸೆಕ್ಷನ್ ಜಾರಿಗೊಳಿಸಲಾಗಿದೆ. ಮಂಗಳೂರು, ಉಡುಪಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕಾಗಿದೆ: ಆರಗ ಜ್ಞಾನೇಂದ್ರ

ಹೈಕೋರ್ಟ್​ನಿಂದ ಇಂದು ಹಿಜಾಬ್ ಪ್ರಕರಣದ ತೀರ್ಪು ಹಿನ್ನೆಲೆ ರಾಜ್ಯದೆಲ್ಲೆಡೆ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ. ಸಣ್ಣಪುಟ್ಟ ಗಲಾಟೆಯೂ ಆಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯದ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಲ್ಲವೆಂಬ ವಿಶ್ವಾಸವಿದೆ. ಡಿಸಿಗಳಿಗೇ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ಹೊಂದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button