ಹಿಂಸಾಚಾರದಲ್ಲಿ ಪತ್ರಕರ್ತನ ಹತ್ಯೆ: ನ್ಯಾಯಾಂಗ ತನಿಖೆಗೆ ಎಡಿಟರ್ಸ್ ಗಿಲ್ಡ್ ಆಗ್ರಹ..!
ಲಖ್ನೋ (ಅಕ್ಟೋಬರ್ 06); ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಹಿಂಸಾಚಾರಕ್ಕೆ ಕಾರಣನಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಕಾರು ಚಲಾಯಿಸಿ 4 ರೈತರನ್ನು ಹತ್ಯೆ ಮಾಡಿದ್ದ. ಈ ಘಟನೆ ನಂತರ ಹಿಂಸಾಚಾರಕ್ಕೆ ಕಾರಣವಾಗಿತ್ತು. ಅಲ್ಲದೆ, ಈ ಇದೇ ಕೃತ್ಯದಲ್ಲಿ ಓರ್ವ ಪತ್ರಕರ್ತನೂ ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಡಿಯೋ ಒಂದು ಇದೀಗ ಬಿಡುಗಡೆಯಾಗಿದ್ದು, ಭಾರೀ ವೈರಲ್ ಆಗಿದೆ.
ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ರಮಣ್ ಕಶ್ಯಪ್ ಅವರು ಭಾನುವಾರ ನಡೆದ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಹೀಗಾಗಿ ಪತ್ರಕರ್ತನ ಸಾವಿನ ತನಿಖೆಗೆ ನ್ಯಾಯಾಂಗ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸಬೇಕು ಎಂದು ಭಾರತದ ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ. ಅಲ್ಲದೆ, ಘಟನೆಯ ತನಿಖೆ ನಡೆಸಲು ಕಶ್ಯಪ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪಡೆದುಕೊಳ್ಳಬೇಕು ಎಂದು ಪತ್ರಕರ್ತರ ಸಂಘ ಒತ್ತಾಯಿಸಿದೆ.
“ಭಯೋತ್ಪಾದಕರ ದಾಳಿ ಎಂದರೆ ರೈತರಲ್ಲಿ ಭಯವನ್ನು ಹುಟ್ಟಿಸುವುದು ಎಂದರ್ಥ. ಪತ್ರಕರ್ತ ಕಶ್ಯಪ್ ಅವರ ಕೊಲೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಗಿಲ್ಡ್ ಹೇಳಿಕೆ ನೀಡಿದೆ.