ಹಿಂದೂ, ಮುಸ್ಲಿಂ ಭೇದ ಮಾಡಿಲ್ಲ: ಯಡಿಯೂರಪ್ಪ
ಶಿರಾಳಕೊಪ್ಪ: ‘ನನ್ನ ಜೀವನದಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದ ಭಾವ ಮಾಡದೇ ಎಲ್ಲಾ ಪ್ರದೇಶಗಳನ್ನು ಅಭಿವೃದ್ಧಿ ಮಾಡಿದ್ದೇನೆ. ವೋಟಿಗಾಗಿ ಕೆಲಸ ಮಾಡದೆ, ಕರ್ತವ್ಯ ಎಂದು ಭಾವಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ₹ 16.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ತಾಳಗುಂದ, ಉಡುಗಣಿ, ಹೊಸೂರು ಹೋಬಳಿ ಸೇರಿ ತಾಲ್ಲೂಕಿನ ಸಮಗ್ರ ನೀರಾವರಿಯನ್ನು ಜಾರಿಗೆ ತರುವ ಮೂಲಕ ರೈತರನ್ನು ಸ್ವಾವಲಂಬಿಯಾಗಿಸಲು ಕ್ರಮ ಕೈಗೊಂಡಿದ್ದೇನೆ’ ಎಂದರು.
ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ, ‘ಸಂಸದ ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸಚಿವರಿಂದಲೂ ಮಾಡಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಖೇಲೋ ಇಂಡಿಯಾ ಅಭಿಯಾನದಲ್ಲಿ
₹ 73 ಕೋಟಿ ವೆಚ್ಚದ ಎರಡು ಕ್ರೀಡಾಶಾಲೆ ಮಂಜೂರಾಗಿದೆ. ಶಿವಮೊಗ್ಗಕ್ಕೆ ಒಂದು, ಇನ್ನೊಂದು ಮಂಡ್ಯಕ್ಕೆ ರಾಘವೇಂದ್ರ ಶಿಫಾರಸು ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದು ಸಚಿವರಾಗಲು ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ ಕೊಡುಗೆ ಅಪಾರ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ‘ಅಕ್ಕಮಹಾದೇವಿಯ ಜನ್ಮಸ್ಥಳ ಉಡುಗಣಿಯಲ್ಲಿ ದೆಹಲಿ ಅಕ್ಷರಧಾಮ ಮಾದರಿಯ ₹ 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಶಿಕಾರಿಪುರಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಬಡವರ ಮಕ್ಕಳ ಶಿಕ್ಷಣಕ್ಕಾಗಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ವಾಜಪೇಯಿ ವಸತಿ ಶಾಲೆ ಹಾಗೂ ಪರಿಶಿಷ್ಠ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದರು.
ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ. ರೇವಣಪ್ಪ, ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್, ತಾಂಡಾ ಅಭಿವೃದ್ಧಿ ಮಂಡಳಿ ನಿರ್ದೇಶಕಿ ಸವಿತಾ ಶಿವಕುಮಾರ್, ಕೆಎಸ್‌ಡಿಎಲ್ ನಿರ್ದೇಶಕಿ ನಿವೇದಿತಾ ರಾಜು, ಭೋವಿ ನಿಗಮದ ನಿರ್ದೇಶಕ ಸಣ್ಣ ಹನುಮಂತಪ್ಪ, ದೇವರಾಜ ಅರಸು ನಿಗಮದ ಭದ್ರಾಪುರ ಹಾಲಪ್ಪ, ಕಬ್ಬಾಡಿ ರಾಜಪ್ಪ, ಸಿಕೇಂದ್ರಪ್ಪ, ಪಟ್ಟಣ ಬಿಜೆಪಿ ಅಧ್ಯಕ್ಷ ಮಂಚಿ ಶಿವಣ್ಣ, ಪುರಸಭೆ ಅಧ್ಯಕ್ಷ್ಯೆ ಮಂಜುಳಾ ರಾಜು, ಉಪಾಧ್ಯಕ್ಷೆ ರಾಜೇಶ್ವರಿ ವಸಂತ, ಸ್ಥಾಯಿ ಸಮಿತಿ ಅಧ್ಯಕ್ಷ ಮಕ್ಬೂಲ್ ಸಾಬ್ ಭಾಗವಹಿಸಿದ್ದರು.
ಭಾವುಕರಾದ ಗುರುಮೂರ್ತಿ
ಮಂಚಿ ವೆಂಕಟರಮಣಪ್ಪ, ಸೋಮಪ್ಪ, ಶಾಂತೇಶಪ್ಪ, ದಾನಿ ರುದ್ರಪ್ಪ ಸೇರಿ ಹಲವು ಕಾರ್ಯಕರ್ತರು ಬಿ.ಎಸ್. ಯಡಿಯೂರಪ್ಪ ಜೊತೆಗೆ ದೂಳನ್ನೂ ಲೆಕ್ಕಿಸದೇ ಮಣ್ಣಿನ ರಸ್ತೆಗಳಲ್ಲಿ ಸೈಕಲ್ ತುಳಿದು ರಾಜ್ಯದಲ್ಲಿ ಬಿಜೆಪಿ ಕಟ್ಟಿದರು. ಇವತ್ತು ಯಡಿಯೂರಪ್ಪ ಜಿಲ್ಲೆ, ತಾಲ್ಲೂಕಿನಲ್ಲಿ ಹೈಟೆಕ್ ರಸ್ತೆ, ನೀರಾವರಿ ಕಾಮಗಾರಿಗಳನ್ನು ಮಾಡಿದ್ದಾರೆ. ಆದರೆ ಅವರಲ್ಲಿ ಎಷ್ಟೋ ಜನ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನೇ ನೋಡಲಿಲ್ಲ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಕಣ್ಣೀರಿಟ್ಟರು.
‘ನನ್ನನ್ನು ಯಡಿಯೂರಪ್ಪ ಹಾಗೂ ಅವರ ಪತ್ನಿ ದಿ. ಮೈತ್ರಾದೇವಿ ಅವರು ಮಗನಂತೆ ನೋಡಿಕೊಂಡರು’ ಎಂದು ಭಾವುಕರಾದರು.