ನವದೆಹಲಿ: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹೊಸ ಕೋರ್ಸ್ ಅನ್ನು ಪ್ರಾರಂಭಿಸಿದೆ. ಹಿಂದೂ ಧರ್ಮದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಎಂಎ ಕೋರ್ಸ್ನಲ್ಲಿ ಹಿಂದೂ ಅಧ್ಯಯನ ಎಂಬ ಹೊಸ ಕೋರ್ಸ್ ಪ್ರಾರಂಭಿಸಿದ್ದಾರೆ. ಉತ್ತರ ಪ್ರದೇಶದ ಬಿಹೆಚ್ಯು ಪ್ರಕಾರ, ಸ್ನಾತಕೋತ್ತರ ಕೋರ್ಸ್ನಲ್ಲಿ ಈ ರೀತಿಯ ಬದಲಾವಣೆ ಇದೇ ಮೊದಲು ಎಂದು ತಿಳಿಸಿದ್ದಾರೆ.
ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮುಖ್ಯಸ್ಥ ವಿ.ಕೆ. ಶುಕ್ಲಾ ಈ ಕೋರ್ಸ್ ಅನ್ನು ಉದ್ಘಾಟಿಸಿದರು ಮತ್ತು ಇದು ರಾಷ್ಟ್ರೀಯ ಶಿಕ್ಷಣ ನೀತಿ, 2020ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಅಂತರಶಿಸ್ತೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಜತೆಗೆ ಈ ಕಾರ್ಯಕ್ರಮವನ್ನು ಭಾರತ್ ಅಧ್ಯಯನ ಕೇಂದ್ರ, ತತ್ವಶಾಸ್ತ್ರ ಮತ್ತು ಧರ್ಮ ಇಲಾಖೆ, ಸಂಸ್ಕೃತ ಇಲಾಖೆ ಮತ್ತು ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆ, ಕಲಾ ವಿಭಾಗದ ಅಡಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಈ ಕೋರ್ಸ್ ಹಿಂದೂ ಧರ್ಮದ ಅನೇಕ ಅಪರಿಚಿತ ಅಂಶಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸುತ್ತದೆ ಮತ್ತು ಈ ಕೋರ್ಸ್ನ ಬೋಧನೆಯು ಹೆಚ್ಚಿನ ಜನರಿಗೆ ಹಿಂದೂ ಧರ್ಮವನ್ನು ತಲುಪಿಸಲು ಸಹಾಯ ಮಾಡುತ್ತದೆ. ಸದ್ಯ ಈ ಕೋರ್ಸ್ನ ಮೊದಲ ಬ್ಯಾಚ್ಗೆ ವಿದೇಶಿ ವಿದ್ಯಾರ್ಥಿ ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಪ್ರೊ.ಶುಕ್ಲಾ ಹೇಳಿದ್ದಾರೆ.
ಬಳಿಕ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ನ ನಿರ್ದೇಶಕ ಡಾ.ವಿಜಯ್ ಶಂಕರ್ ಶುಕ್ಲಾ, ಹಿಂದೂ ಅಧ್ಯಯನದ ಬಗ್ಗೆ ಇಂತಹ ಕೋರ್ಸ್ನ ಅಗತ್ಯವನ್ನು ಮತ್ತಷ್ಟು ಮನವರಿಕೆ ಮಾಡುವಂತೆ ವಿವರಣೆ ನೀಡಿದರು.
ಬಳಿಕ ಪ್ರೊ.ರಾಕೇಶ್ ಉಪಾಧ್ಯಾಯ ಮಾತನಾಡಿ, ಸನಾತನ ಜೀವನ ಮೌಲ್ಯಗಳ ನಿರ್ಮಾಣಕ್ಕೆ ಈ ಕೋರ್ಸ್ ಮಹತ್ವದ್ದಾಗಿದೆ ಎಂದು ತಿಳಿಸಿದರು.