ಆರೋಗ್ಯಇತ್ತೀಚಿನ ಸುದ್ದಿಸುದ್ದಿ

ಅನ್ನ ತಿಂದರೆ ದಪ್ಪ ಆಗೋದಿಲ್ಲ, ಶುಗರ್ ಬರೋದಿಲ್ಲ…..

ಅನ್ನ ತಿನ್ನಬೇಡಪ್ಪ ದಪ್ಪ ಆಗ್ತೀಯಾ. ಬರೀ ಅನ್ನ ತಿಂತಾ ಇದ್ರೆ ಶುಗರ್ ಬರುತ್ತೆ ಎಂಬೆಲ್ಲಾ ಬುದ್ಧಿಮಾತುಗಳನ್ನ ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಇದೆಲ್ಲಾ ಸುಳ್ಳು. ಮಾಮೂಲಿಯ ಬಿಳಿ ಅನ್ನ ತಿಂದರೆ ದಪ್ಪ ಆಗೋದಿಲ್ಲ, ಶುಗರ್ ಬರೋದಿಲ್ಲ ಎಂದು ಪ್ರಖ್ಯಾತ ನ್ಯೂಟ್ರೀಷನಿಸ್ಟ್ ರುಜುತಾ ದಿವೇಕರ್ ಹೇಳುತ್ತಾರೆ. ಅನ್ನದಲ್ಲಿ ಅಂಥ ವಿಶೇಷ ಶಕ್ತಿ ಏನಿದೆ?

ಅಕ್ಕಿ, ಅಥವಾ ಅನ್ನದ ಬಗ್ಗೆ ಬಹಳಷ್ಟು ಪೂರ್ವಗ್ರಹ ಪೀಡಿತ ಅನುಮಾನಗಳು ಬಹಳ ಮಂದಿಯಲ್ಲಿ ಇವೆ. ಅದರಲ್ಲಿ ಬಹಳ ಪ್ರಮುಖವಾದುದು, ಅನ್ನ ತಿಂದರೆ ದಪ್ಪ ಆಗುತ್ತಾರೆ ಹಾಗೂ ಶುಗರ್ ಹೆಚ್ಚಾಗುತ್ತದೆ ಎಂಬುದು. ಇವೆಲ್ಲವೂ ಸುಳ್ಳು ಎಂದು ಖ್ಯಾತ ನ್ಯೂಟ್ರಿಶನ್ ತಜ್ಞೆ ರುಜುತಾ ದಿವೇಕರ್ ಹೇಳುತ್ತಾರೆ. ಇವರ ಪ್ರಕಾರ, ಸಿಂಗಲ್ ಪಾಲಿಶ್ ಆದ ಬಿಳಿ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು. ಕೈಯಿಂದ ಭತ್ತ ಕುಟ್ಟಿ ಮಾಡಿದ ಅಕ್ಕಿ ಬಗ್ಗೆ ಚಿಂತೆಯೇ ಮಾಡಬೇಡಿ. ನಿಮ್ಮ ಪ್ರದೇಶದಲ್ಲಿ ಇಂಥ ಅಕ್ಕಿ ಸಿಗಲಿಲ್ಲವೆಂದರೆ, ಸ್ಥಳೀಯವಾಗಿ ಬೆಳೆಯುವ ಅಕ್ಕಿಯನ್ನು ತಿನ್ನಬಹುದು ಎನ್ನುತ್ತಾರೆ ರುಜುತಾ.

ವೈಟ್ ರೈಸ್​ಗಿಂತ ಬ್ರೌನ್ ರೈಸ್ ಆರೋಗ್ಯಕರ ಎಂಬುದೂ ಸುಳ್ಳು. ಬ್ರೌನ್ ರೈಸ್​ನಲ್ಲಿ ತೀರಾ ಎನಿಸುವಷ್ಟು ಫೈಬರ್ ಇರುತ್ತದೆ. ನಮ್ಮ ಪ್ರತಿರೋಧ ಶಕ್ತಿಯ ನಿರ್ವಹಣೆಗೆ ಅಗತ್ಯವಾದ ಜಿಂಕ್ ಅಂಶವನ್ನು ದೇಹದೊಳಗೆ ಹೀರಿಕೊಳ್ಳಲು ಇದರಿಂದ ಕಷ್ಟವಾಗುತ್ತದೆಯಂತೆ. ದೇಹ ದಪ್ಪಗಾಗದಂತೆ ನೋಡಿಕೊಳ್ಳಲು ಉತ್ತಮ ಫ್ಯಾಟ್ ಮತ್ತು ಪ್ರೊಟೀನ್ ಬಹಳ ಮುಖ್ಯ. ಅನ್ನ, ಸಾಂಬಾರ್ ಮತ್ತು ತುಪ್ಪ ಇರುವ ಊಟದಲ್ಲಿ ಇವೆರಡೂ ಕೂಡ ಸಮೃದ್ಧವಾಗಿರುತ್ತವೆ. ಮೇಲಾಗಿ ಇದು ಸುಲಭವಾಗಿ ಜೀರ್ಣವಾಗುತ್ತದೆ. ನೀವು ಸಣ್ಣಗಾಗುವ ಇರಾದೆಯಲ್ಲಿದ್ದರೆ ರಾತ್ರಿ ಮಲಗುವ 2 ಗಂಟೆ ಮುನ್ನ ಅನ್ನಾಹಾರ ಸೇವಿಸಿ.

ಅನ್ನದಲ್ಲಿ ಗ್ಲುಟೆನ್ ಇರುತ್ತೆಂಬುದೂ ಸುಳ್ಳಂತೆ. ವೈಟ್ ರೈಸ್ ಆಗಲೀ ಬ್ರೌನ್ ರೈಸ್ ಆಗಲೀ ಗ್ಲುಟೆನ್ ಇರುವುದಿಲ್ಲ ಎಂದು ರುಜುತಾ ದಿವೇಕರ್ ತಿಳಿಸುತ್ತಾರೆ. ಅಕ್ಕಿ ಬಗ್ಗೆ ಸುಳ್ಳು ಸುದ್ದಿಗಳನ್ನು ನಂಬದಿರಿ. ಭಾರತದ ಜನರು ಬಹಳ ವರ್ಷಗಳಿಂದ ಅಕ್ಕಿಯನ್ನು ಪ್ರಮುಖ ಆಹಾರವನ್ನಾಗಿ ಸೇವಿಸುತ್ತಾ ಬರುತ್ತಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಅನ್ನ ಸೇವಿಸಿದರೆ ಯಾವ ಸಮಸ್ಯೆಯೂ ಕಾಡದು ಎನ್ನುತ್ತಾರೆ ತಜ್ಞರು.

Related Articles

Leave a Reply

Your email address will not be published. Required fields are marked *

Back to top button