ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ
ಮುಂಜಾನೆ ವಾರ್ತೆ ದಿನ ಪತ್ರಿಕೆ
ವರದಿ ಆರ್ ಉಮೇಶ್ ಮಲಾರಪಾಳ್ಯ
ಹನೂರು ತಾಲೂಕಿನ ಹೂಗ್ಯ, ಮಾರ್ಟಳ್ಳಿ, ಇನ್ನಿತರ ಕಡೆ ಸಂವಿಧಾನ ಜಾಗೃತಿ ಜಾಥಾ ಇಂದು ಯಶಸ್ವಿಯಾಗಿ ನಡೆದಿದೆ.
ಹೂಗ್ಯ ಗ್ರಾಮಕ್ಕೆ ಆಗಮಿಸಿದ ಜಾಗೃತಿ ಜಾಥಾಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಯಘೋಷ ಮೊಳಗಿಸಲಾಯಿತು. ಶಾಲಾ ಮಕ್ಕಳು ಸಂವಿಧಾನದ ಮಹತ್ವದ ವಿಚಾರಗಳ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬೈಕ್ ರ್ಯಾಲಿ ಸಹ ನಡೆಸಲಾಯಿತು.
ಜಾಥಾ ಕಾರ್ಯಕ್ರಮ ಮುಗಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುರುಗೇಶ್ವರಿ ಮುರುಗ ವಹಿಸಿದ್ದರು. ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು. ಪುಸ್ತಕ ಜೋಳಿಗೆ ಮೂಲಕ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷರಾದ ರಾಜಮ್ಮ ರಾಜೇಂದ್ರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುಷ್ಪಲತ, ಊರಿನ ಮುಖಂಡರು, ಅದಿಕಾರಿಗಳು ಉಪಸ್ಥಿತರಿದ್ದರು.
ಮಾರ್ಟಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದೊಂದಿಗೆ ಬೈಕ್, ಬೈಸಿಕಲ್, ಆಟೋ ರ್ಯಾಲಿ ಸಹ ನಡೆದವು. ವಿದ್ಯಾರ್ಥಿನಿಯರು ಸೀರೆಯುಟ್ಟು ಪೂರ್ಣಕುಂಭ ಹೊತ್ತು ಸಾಗಿದರು. ಲಂಬಾಣಿ ನೃತ್ಯ, ಬ್ಯಾಂಡ್ ಸೆಟ್, ತಮಟೆ, ಡೊಳ್ಳು ಕುಣಿತ ಮೆರಗು ನೀಡಿದವು.
ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ನಾಲ್ ರೋಡ್‍ನಿಂದ ಮಾರ್ಟಳ್ಳಿವರೆಗೆ ಬೃಹತ್ ಜಾಥಾದಲ್ಲಿ ಭಾಗವಹಿಸಿ ಸಂವಿಧಾನದ ಅರಿವಿನ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಮಂಗಳವಾರ ಮೀಣ್ಯಂ ಗ್ರಾಮದಲ್ಲಿ ಕೂಡ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ ಮೆರವಣಿಗೆಗೆ ಅದ್ದೂರಿ ಸ್ವಾಗತ ನೀಡಲಾಯಿತು. ಡೊಳ್ಳು ಇನ್ನಿತರ ವಾದನಕ್ಕೆ ಜನ ಕುಣಿದು ಕುಪ್ಪಳಿಸಿದರು. ಗ್ರಾಮದಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು. ಮೀಣ್ಯಂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಮ್ಮ, ಇನ್ನಿತರ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ, ಇತರರು ಪಾಲ್ಗೊಂಡರು.
ದಿನ್ನಳ್ಳಿ ಗ್ರಾಮದಲ್ಲಿಯೂ ಸಂವಿಧಾನ ಜಾಗೃತಿ ಜಾಥಾ ಅರ್ಥಪೂರ್ಣವಾಗಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾರ್ವತಿಬಾಯಿ, ಇನ್ನಿತರ ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುರೇಶ್, ಇತರರು ಭಾಗವಹಿಸಿದ್ದರು. ಶಾಲಾ ಮಕ್ಕಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಂವಿಧಾನ ಕುರಿತು ಅರಿವು ಮೂಡಿಸಿದರು.