ದೇಶ

ಸೆಪ್ಟೆಂಬರ್ 27ರಂದು ಭಾರತ ಬಂದ್: ಏನಿರುತ್ತೆ? ಏನಿರಲ್ಲ?

ಬೆಂಗಳೂರು, ಸೆಪ್ಟೆಂಬರ್ 23: ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೆ.27 ರಂದು ಭಾರತ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ರಾಜ್ಯದಲ್ಲಿಯೂ ಕೆಲ ರೈತ ಪರ ಮತ್ತು ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳು, ನೌಕರರ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿದ್ದು, ವಾರದ ಆರಂಭದ ದಿನ ಬಸ್‌, ಆಟೋ, ಕ್ಯಾಬ್ ಮತ್ತು ಅಗತ್ಯ ವಸ್ತುಗಳ ಸೇವೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸ ಆಗುವ ಸಾಧ್ಯತೆ ಇದೆ.

ದೇಶದಾದ್ಯಂತ ಪ್ರಮುಖ 500 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸಲಿವೆ. ಬೆಂಗಳೂರು ಮತ್ತು ರಾಜ್ಯದ ಇತರೆ ಪ್ರಮುಖ ಜಿಲ್ಲೆಗಳಲ್ಲಿಯೂ ಸಂಘಟನೆಗಳು ಮೆರವಣಿಗೆ ಹಮ್ಮಿಕೊಂಡಿದ್ದು, ಸಹಜವಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಸಂಘಟನೆಗಳು ಸಭೆಗಳನ್ನು ನಡೆಸಿ ಭಾರತ ಬಂದ್ ದಿನದ ಪ್ರತಿಭಟನೆ ಯಾವ ಸ್ವರೂಪದಲ್ಲಿ ಇರಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿವೆ. ಅಲ್ಲದೆ, ಬ್ಯಾಂಕ್ ನೌಕರರು, ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರ ಸಂಘಟನೆಗಳ ನೆರವನ್ನೂ ಕೋರಿದ್ದು, ಇದರಿಂದ ಜನಸಾಮಾನ್ಯರಿಗೆ ಪ್ರತಿಭಟನೆಯ ಉದ್ದೇಶ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ರೈತರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ ಒಪ್ಪಂದ) ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯ ವಿರುದ್ಧ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿಯೂ ಸಹ ಕರೋನಾ ಮಧ್ಯೆಯೇ ಭಾರತ ಬಂದ್‌ ನಡೆಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ತದನಂತರ ಕಳೆದ ಮಾರ್ಚ್‌ 26ರಂದು ಸಹ ಭಾರತ ಬಂದ್‌ಗೆ ಕರೆ ನೀಡಲಾಗಿತ್ತು. ಈಗ ಮತ್ತೊಮ್ಮೆ ಭಾರತ ಬಂದ್ ಕರೆ ನೀಡುವ ಮೂಲಕ ಹೋರಾಟದ ಬಿಸಿಯನ್ನು ಕಾಪಾಡುವ ಪ್ರಯತ್ನ ಮುಂದುವರಿಸಲಾಗುತ್ತಿದೆ.

ಬಂದ್ ಹಿನ್ನೆಲೆಯಲ್ಲಿ ಹಾಲು, ತರಕಾರಿ, ಮೆಡಿಕಲ್ ಹೀಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಸಾರಿಗೆ ಸಿಬ್ಬಂದಿ, ಆಟೋ, ಕ್ಯಾಬ್ ಚಾಲಕರು ಇದುವರೆಗೆ ಬೆಂಬಲ ವ್ಯಕ್ತಪಡಿಸಿಲ್ಲವಾದರೂ ಅಂದು ಪ್ರತಿಭಟನೆಯ ಸ್ವರೂಪದ ಮೇಲೆ ಸ್ವಲ್ಪಮಟ್ಟಿನ ವ್ಯತ್ಯಯ ಆಗುವ ಸಾಧ್ಯತೆ ಕಾಣುತ್ತಿದೆ. ಮತ್ತೊಂದೆಡೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ ಕಾರ್ಯಚಟುವಟಿಕಯಲ್ಲಿ ವ್ಯತ್ಯಯ ಆಗಬಹುದು. ಉಳಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆದರೆ, ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇರಬಹುದು.

“ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ಕರೆ ನೀಡಲಾಗಿರುವ ಭಾರತ್‌ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಂದ್ ಯಶಸ್ವಿಯಾಗಲಿದೆ. ಕೃಷಿ ನೀತಿಗಳು ರೈತರನ್ನು ಉತ್ತೇಜಿಸುವ ಬದಲು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ತಮಗೆ ಉತ್ತಮ ದರ ಸಿಗುವ ಕಡೆ ಮಾರಾಟ ಮಾಡುವುದಕ್ಕೂ ಅವಕಾಶ ಸಿಗುತ್ತಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ರೈತರನ್ನು ಸಾಲಬಾಧೆಗೆ ದೂಡಿದೆ. ಇದೆಲ್ಲದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು” ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಈ ಪ್ರತಿಭಟನೆ ಕೇವಲ ರೈತರಿಗಷ್ಟೇ ಸೀಮಿತವಲ್ಲ. ಜನಸಾಮಾನ್ಯರ ವಿಷಯಗಳನ್ನೂ ಒಳಗೊಂಡಿದೆ. ಕೊರೊನಾ ಸಂಕಷ್ಟದಿಂದ ಜನರು ಉದ್ಯೋಗಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಿದೆ. ಅಡುಗೆ ಅನಿಲ, ಪೆಟ್ರೋಲ್, ಎಣ್ಣೆ, ದಿನಸಿ ಬೆಲೆ ಗಗನ ಮುಟ್ಟುತ್ತಿದೆ. ಅಗತ್ಯ ವಸ್ತುಗಳ ಬೆಲೆಯನ್ನೂ ಸಹ ಕಡಿಮೆ ಮಾಡಬೇಕು ಎಂಬ ಒತ್ತಡವನ್ನು ಸರ್ಕಾರದ ಮುಂದಿಡಲಾಗುವುದು ಎಂದು ಅವರು ಹೇಳಿದರು.

“ಬಂದ್‌ಗೆ ಬೆಂಬಲ ಕೋರಿ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದೇನೆ. ಎಲ್ಲಾ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಎಲ್ಲ ರೈತಪರ ಸಂಘಟನೆಗಳು, ಜನಪರ, ದಲಿತಪರ ಸಂಘಟನೆಗಳು ಹಾಗೂ ಸರ್ಕಾರಿ, ಬ್ಯಾಂಕ್‌ ನೌಕರರು ಬೆಂಬಲ ಸೂಚಿಸಿದ್ದಾರೆ” ಎಂದು ಕುರುಬೂರು ಶಾಂತಕುಮಾರ್ ಅವರು “ಒನ್‌ಇಂಡಿಯಾ”ಗೆ ಪ್ರತಿಕ್ರಿಯಿಸಿದರು.

Related Articles

Leave a Reply

Your email address will not be published. Required fields are marked *

Back to top button