ಸುಳ್ಳು ಸುದ್ದಿಗಳ ವಿರುದ್ಧ ಕೇಂದ್ರ ಸರ್ಕಾರದ ಸಮರ ಸೋಶಿಯಲ್ ಮೀಡಿಯಾಗಳ ಮುಖ್ಯಸ್ಥರೊಂದಿಗೆ ಸಭೆ!
ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಅನ್ನೋದು ಎಷ್ಟು ಜನಪ್ರಿಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಸಾಮಾಜಿಕ ಜಾಲತಾಣ ಎನ್ನುವುದು ಬರೀ ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನಷ್ಟೇ ಅಲ್ಲ, ಒಂದಿಡೀ ಸಮಾಜದ ಅಭಿಪ್ರಾಯವನ್ನೇ ಬದಲಿಸುತ್ತೆ ಅನ್ನುವುದೂ ಸಹ ತಿಳಿದೇ ಇದೆ. ಇಷ್ಟು ಪ್ರಭಾವಿಯಾಗಿರೋ ಸೋಶಿಯಲ್ ಮೀಡಿಯಾಗಳು ಸತ್ಯವನ್ನೇ ಪ್ರತಿಪಾದಿಸಬೇಕು. ಆದರೆ ಬಹುತೇಕ ಬಾರಿ ನೈಜ ಸುದ್ದಿಗಳು, ನೈಜ ಘಟನೆಗಳಿಗಿಂತ ಫೇಕ್ ಅಥವಾ ಸುಳ್ಳು ಸುದ್ದಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿರುತ್ತದೆ. ಇದರಿಂದ ಎಷ್ಟೋ ಬಾರಿ ಅನಾಹುತಗಳೇ ನಡೆಯುತ್ತಿವೆ. ಅದರಲ್ಲೂ ಕೆಲವೊಂದು ಫೇಕ್ ಯೂ ಟ್ಯೂಬ್ ಚಾನೆಲ್, ಫೇಕ್ ಫೇಸ್‌ಬುಕ್ , ಟ್ವಿಟ್ಟರ್ ಖಾತೆಗಳನ್ನು ಬಳಸಿ ಕಿಡಿಗೇಡಿಗಳು ಇಲ್ಲ ಸಲ್ಲದ ಸುದ್ದಿ ಹರಡುತ್ತಾರೆ. ಇಂತಹ ನಕಲಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಇದೀಗ ಅದರ ವಿರುದ್ಧದ ಸಮರ ಮುಂದುವರೆಸಿದೆ.
ಗೂಗಲ್, ಟ್ವಿಟ್ಟರ್ ಜೊತೆ ಸರ್ಕಾರದ ಸಭೆ
ಗೂಗಲ್, ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳು ಭಾರತದಲ್ಲಿ ಅತಿಯಾಗಿ ಬಳಸಲ್ಪಡುತ್ತಿದೆ. ಹೀಗಾಗಿ ಇವುಗಳಲ್ಲಿ ನೈಜ ಸುದ್ದಿಗಿಂತ ಫೇಕ್ ನ್ಯೂಸ್‌ಗಳೇ ಅತೀ ಬೇಗ ವೈರಲ್ ಆಗುತ್ತವೆ. ಇದೇ ಕಾರಣಕ್ಕೆ ಇವುಗಳ ಮೇಲೆ ಹದ್ದಿನ ಕಣ್ಣಿಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಗೂಗಲ್, ಟ್ವಿಟ್ಟರ್, ಫೇಸ್‌ಬುಕ್‌ನ ಮುಖ್ಯಸ್ಥರೊಂದಿಗೆ ಸಭೆ ನಡೆಸಿರುವ ಸರ್ಕಾರ, ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಸುದ್ದಿ ಹರಡುವುದನ್ನು ತಡೆಯಲು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಕೇಳಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಫೇಕ್ ನ್ಯೂಸ್ ಹರಡದಂತೆ ಖಡಕ್ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಯ್ತು.
ಭಾರತದಲ್ಲಿ ವಿಷ ಬೀಜ ಬಿತ್ತುತ್ತಿವೆ ಪಾಕ್ ಮಾಧ್ಯಮಗಳು
ಪಕ್ಕದ ರಾಷ್ಟ್ರ ಪಾಕಿಸ್ತಾನ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಒಂದು ಕಡೆ ಉಗ್ರರನ್ನು ಛೂ ಬಿಡುತ್ತಿರೋ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಮತ್ತೊಂದೆಡೆ ಇದೇ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳ ಮೂಲಕವೂ ಭಾರತದ ಮೇಲೆ ಸಮರ ಸಾರಿರುವುದು ಬಹಿರಂಗ ವಿಚಾರ. ಪಾಕಿಸ್ತಾನದ ಹಲವು ಯೂ ಟ್ಯೂಬ್ ಚಾನೆಲ್‌ಗಳು, ಫೇಸ್‌ಬುಕ್, ಟ್ವಿಟ್ಟರ್ ಅಕೌಂಟ್‌ಗಳು, ಇನ್ನಿತರೇ ಸಾಮಾಜಿಕ ಜಾಲತಾಣಗಳು ಭಾರತದ ವಿರುದ್ಧ ಸುಳ್ಳು ಸುದ್ದಿ ಹರಡುತ್ತಲೇ ಇರುತ್ತವೆ. ಇಂತಹ ಫೇಕ್ ಮಾಧ್ಯಮಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಮುಂದುವರೆಸಿದೆ.
ಈಗಾಗಲೇ ಪಾಕಿಸ್ತಾನ ಮೂಲದ 32 ಫೇಕ್ ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧಿಸಿದೆ. 2 ಟ್ವಿಟ್ಟರ್ ಖಾತೆಗಳು, 2 ಇನ್ಸ್ಟಾಗ್ರಾಮ್ ಖಾತೆಗಳು, 2 ಅಂತರ್ಜಾಲ ತಾಣಗಳು ಹಾಗೂ ಒಂದು ಫೇಸ್ ಬುಕ್ ಖಾತೆಯನ್ನೂ ಕೂಡ ನಿಷೇಧಿಸಲಾಗಿದೆ. ಈ ಚಾನೆಲ್‌ಗಳು “ನಕಲಿ ಸುದ್ದಿ” ಅಥವಾ “ಭಾರತ ವಿರೋಧಿ” ವಿಷಯವನ್ನು ಪ್ರಚಾರ ಮಾಡುತ್ತಿವೆ ಮತ್ತು ನೆರೆಯ ಪಾಕಿಸ್ತಾನ ಮೂಲದ ಖಾತೆಗಳಿಂದ ತಪ್ಪು ಮಾಹಿತಿ ಹರಡುತ್ತಿದೆ ಎಂದು ಸರ್ಕಾರ ಹೇಳಿದೆ.
ನಕಲಿ ಸುದ್ದಿ ಹರಡದಂತೆ ಸರ್ಕಾರ ವಾರ್ನಿಂಗ್ ನಕಲಿ ವಿಷಯವನ್ನು ಸ್ವಯಂಚಾಲಿತವಾಗಿ ತೆಗೆದುಹಾಕಲು ಅದರ ಆಂತರಿಕ ಮಾರ್ಗಸೂಚಿಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳು ಗೂಗಲ್‌ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ದೊಡ್ಡ ಸಾಮಾಜಿಕ ಮಾಧ್ಯಮಗಳು ಫೇಕ್ ನ್ಯೂಸ್ ತಡೆಯಲು ಯತ್ನಿಸುತ್ತಿಲ್ಲ ಅಂತ ಅಧಿಕಾರಿಗಳು ಕಿಡಿಕಾರಿದ್ದಾರೆ. ಇನ್ನು ಮುಂದೆ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಿದ್ದಾರೆ.
ಫೇಕ್ ನ್ಯೂಸ್ ತಡೆಯಲು ಕ್ರಮ
ಸರ್ಕಾರದ ನಿರ್ದೇಶನಕ್ಕೆ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ನಕಲಿ ಖಾತೆಗಳನ್ನು ಈಗಾಗಲೇ ತೆಗೆದು ಹಾಕಲಾಗುತ್ತಿದೆ. ಆ ಕಾರ್ಯವನ್ನು ಮುಂದುವರೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.