ಸುತ್ತಿಗೆಯಿಂದ ಹೊಡೆದು ಅತ್ತೆಯನ್ನೇ ಕೊಂದ ಸೊಸೆ..!
ಚಳ್ಳಕೆರೆ(ಜ.24): ಕಳೆದ ಹಲವಾರು ವರ್ಷಗಳಿಂದ ಗಂಡ ಮತ್ತು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಗೃಹಿಣಿಯೊಬ್ಬಳು ಪ್ರತಿನಿತ್ಯ ತನ್ನ ಅತ್ತೆ ನಿರಂತರ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನ್ನು ಸಹಿಸಲಾಗದೆ ರೋಷದಿಂದ ಅತ್ತೆಯನ್ನೆ ಕಬ್ಬಿಣದ ಸುತ್ತಿಗೆಯಿಂದ ತಲೆ, ಮೈಕೈಗೆ ಹೊಡೆದು ಕೊಲೆ(Murder) ಮಾಡಿರುವ ಘಟನೆ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ರುದ್ರಮ್ಮ(60) ಎಂಬ ಮಹಿಳೆ(Woman) ಕೊಲೆಗೀಡಾಗಿದ್ದು, ಸೊಸೆ ಮುದ್ದಕ್ಕನೇ(38) ತನ್ನ ಅತ್ತೆಯನ್ನು ಕೊಲೆಗೈದವರಾಗಿದ್ದಾರೆ. ನಿತ್ಯ ಸಂಸಾರದಲ್ಲಿ ಆಗಿಂದಾಗಲೇ ಅತ್ತೆ ರುದ್ರಮ್ಮ, ಸೊಸೆ ಮುದ್ದಮ್ಮಳ ನಡುವೆ ಮಾತಿನ ಘರ್ಷಣೆ ನಡೆಯುತ್ತಿತ್ತು. ಶನಿವಾರ ರಾತ್ರಿಯೂ ಸಹ ಜಗಳ ಮುಂದುವರೆದು ಕೊಲೆಯಲ್ಲಿ ಕೊನೆಕಂಡಿದೆ.
ರುದ್ರಮ್ಮಳ ಪತಿ ಕೆಂಚಪ್ಪ ಈ ಬಗ್ಗೆ ಪೊಲೀಸರಿಗೆ(Police) ದೂರು ನೀಡಿ, ನನ್ನ ಮಗ ವಸಂತಕುಮಾರ್, ಸೊಸೆ ಮುದ್ದಕ್ಕ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ನಾವು ವಾಸವಿದ್ದು, ಶನಿವಾರ ರಾತ್ರಿ ನಾನು ನನ್ನ ಮೊಮ್ಮಗ ಮನೆಯ ಹೊರಭಾಗದಲ್ಲಿ ಮಲಗಿದ್ದೆವು. ಒಳಗೆ ಮಲಗಿದ್ದ ನನ್ನ ಹೆಂಡತಿ ರುದ್ರಮ್ಮ ರಾತ್ರಿ ಕಿರುಚಿಕೊಂಡಾಗ ಒಳಗೆ ಹೋಗಿ ನೋಡಿದಾಗ ಸೊಸೆ ಮುದ್ದಕ್ಕ ಕಬ್ಬಿಣದ ಸುತ್ತಿಗೆಯಿಂದ ತಲೆ, ಮೈಕೈಗೆ ಹೊಡೆದು ರಕ್ತಗಾಯಗೊಳಿಸಿ ನಂತರ ಸುತ್ತಿಗೆಯೊಂದಿಗೆ ಮನೆಯಿಂದ ಹೊರ ಹೋಗಿದ್ದಾಳೆ. ಕೂಡಲೇ ನನ್ನ ಮಗ ಹಾಗೂ ನೆರೆಹೊರೆಯವರು ಸೇರಿ ಪೊಲೀಸರಿಗೆ ಮಾಹಿತಿ ನೀಡಿ ಕೊಲೆಗೈದ ಸೊಸೆ ಮುದ್ದಕ್ಕಳ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ :
ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದ ರುದ್ರಮ್ಮನ ಕೊಲೆ ಪ್ರಕರಣದಲ್ಲಿ ಆರೋಪಿ ಸೊಸೆ ಮುದ್ದಕ್ಕಳನ್ನು ಹಾಗೂ ತಾಲೂಕಿನ ರಂಗವ್ವನಹಳ್ಳಿ ಗ್ರಾಮದ ದುರ್ಗಮ್ಮ(ದುರ್ಗಾಂಭಿಕ) ದೇವಸ್ಥಾನದ ಪೂಜಾರಿಕೆ ಮತ್ತು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಜಯರಾಮಪ್ಪನನ್ನು ಕೊಲೆಗೈದ ಆರೋಪಿಗಳಾದ ಬಿ.ಚನ್ನಪ್ಪ ಮತ್ತು ಆರ್.ಓಬಳೇಶ್ರವರನ್ನು ಬಂಧಿಸಿ(Arrest) ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಠಾಣಾ ಇನ್ಸ್ಪೆಕ್ಟರ್ ಜೆ.ಎಸ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ ಮತ್ತು ಡಿವೈಎಸ್ಪಿಯವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು, ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ರಂಗವ್ವನಹಳ್ಳಿ ಕೊಲೆ ಪ್ರಕರಣದ ಇನ್ನೂ ಮೂರು ಜನ ಆರೋಪಿಗಳನ್ನು(Accused) ವಶಕ್ಕೆ ಪಡೆಯಬೇಕಿದೆ.
ಸೆಕ್ಯೂರಿಟಿಗಾರ್ಡ್ ಕೊಲೆ: ಆರೋಪಿ ಅರೆಸ್ಟ್
ಹೊಸಪೇಟೆ(Hosapete): ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಸೆಕ್ಯೂರಿಟಿಗಾರ್ಡ್ನನ್ನು(Security Guard) ಕೊಲೆ ಮಾಡಿದ್ದ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕಾಲೇಜಿನಲ್ಲಿ ನಡೆಯುತ್ತಿರುವ ಕಾಮಗಾರಿಯ ಟೈಲ್ಸ್ ಹಾಗೂ ಗ್ರಾನೈಟ್ ಅಳವಡಿಕೆಯ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಬಿಹಾರ ರಾಜ್ಯದ ಬಾಗಲಪೂರ್ ಜಿಲ್ಲೆಯ ಬಾಹತ್ರ ಗ್ರಾಮದ ಸಂಜೀವ್ ಕುಮಾರ್ (23) ಬಂಧಿತ ಆರೋಪಿ. ಕೊಪ್ಪಳ ಜಿಲ್ಲೆಯ ಸೆಕ್ಯೂರಿಟಿ ಗಾರ್ಡ್ ಗೌಸ್ ಸಾಬ್ ಗುತ್ತಿಗೆದಾರರ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಟೈಲ್ಸ್, ಗ್ರಾನೈಟ್ ಅಳವಡಿಕೆ ಕೆಲಸಗಾರರಿಗೆ ಸಂಜೀವ ಕುಮಾರ್ ಸರಿಯಾಗಿ ಸಂಬಳ ನೀಡದಿರುವ ವಿಷಯಕ್ಕೆ ವಾಗ್ವಾದ ನಡೆದಾಗ ಗೌಸ್ಸಾಬ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ, ಸಂಜೀವ ಕುಮಾರ್ಗೆ ಬೈದಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಬಗ್ಗೆ ಸಂಜೀವ್ ಕುಮಾರ್ನನ್ನು ವಿಚಾರಣೆಗೊಳಪಡಿಸಿದಾಗ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.