ಇಶಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಕ್ಕೆ ಪಕ್ಷದಲ್ಲೇ ಆಕ್ಷೇಪ

ಈ ಬಾರಿಯ ಶಿವರಾತ್ರಿ ದಿನದಂದು ಇಶಾ ಪೌಂಡೇಶನ್ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಖುದ್ದು ಜಗ್ಗಿ ವಾಸುದೇವ್ ಅವರೇ ಮನೆಗೆ ಹೋಗಿ ಡಿಕೆ ಶಿವಕುಮಾರ್ ಕುಟುಂಬಕ್ಕೆ ಆಹ್ವಾನ ನೀಡಿದ್ದು, ಅದರಂತೆ ಡಿಕೆಶಿ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಆದ್ರೆ, ಇದಕ್ಕೆ ಪಕ್ಷದಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಬಾರಿ ಶಿವರಾತ್ರಿಯಂದು ಇಶಾ ಪೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಡಿಕೆಶಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಇಶಾ ಪೌಂಡೇಶನ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆಂದು ಹೇಳಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಸ್ವಪಕ್ಷದಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ. ಜಾತ್ಯತೀತ ಪಕ್ಷದ ಅಧ್ಯಕ್ಷರಾಗಿ, ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ, ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನ ಅಪಹಾಸ್ಯ ಮಾಡುವರಿಗೆ ಸಾರ್ವಜನಿಕವಾಗಿ ಧನ್ಯವಾದ, ಕೃತಜ್ಞತೆ ವ್ಯಕ್ತಪಡಿಸುವುದು ಸರಿಯಾ? ಎಂದು ಎಐಸಿಸಿ ಜನರಲ್ ಸೆಕ್ರೆಟರಿ ಪಿ.ವಿ.ಮೋಹನ್ ಪ್ರಶ್ನಿಸಿದ್ದಾರೆ.ಅವರ (ಜಗ್ಗಿ ವಾಸುದೇವ್) ಅಭಿಪ್ರಾಯ RSS ನಿರೂಪಣೆಗಳೊಂದಿಗೆ ಹೊಂದಿಕೆ ಆಗುತ್ತವೆ. ಡಿಸಿಎಂ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಬದ್ಧತೆ ಅಂದರೆ ರಾಜಿ ಅಲ್ಲ. ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ಇದು ಮಾರಕ. ಇದನ್ನ ನಿರ್ಲಕ್ಷಿಸುವುದರಿಂದ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳಿಸಿದಂತೆ. RSS ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಆಹ್ವಾನ ನೀಡಿದ್ದಾರೆಂದು ಮಾಹಿತಿ. ಅವರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಒಬ್ಬರು. ನಮ್ಮ ಪಕ್ಷದ ಅಧ್ಯಕ್ಷರು ವೇದಿಕೆಯನ್ನು ಹಂಚಿಕೊಂಡು ಇಡೀ ರಾತ್ರಿ ಅಮಿತ್ ಶಾ ಜೊತೆ ಕಳೆಯುವುದನ್ನು ನೋಡುವುದು ಹೆಚ್ಚು ತೊಂದರೆದಾಯಕವಾಗಿದೆ, ಇದು ಗ್ರಹಿಸಲು ಕಷ್ಟ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.ಡಿಕೆ ಶಿವಕುಮಾರ್ ಅವರು ಇಶಾ ಪೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ಕೇವಲ ಎಐಸಿಸಿ ಜನರಲ್ ಸೆಕ್ರೆಟರಿ ಪಿ.ವಿ.ಮೋಹನ್ ವಿರೋಧ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಹ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಿದ್ಧಾಂತಗಳೇನು| ನಿಮ್ಮ ಸಿದ್ಧಾಂತಗಳೇನು? ಜಗ್ಗಿ ವಾಸುದೇವ್ ಅವರು ಬಿಜೆಪಿ ಪರ ಇರುವವರು. ಅವರು ಕರೆದಿದ್ದಾರೆ ಎಂದ ಮಾತ್ರಕ್ಕೆ ಹೋಗುವುದು ಸರಿಯಲ್ಲ ಎನ್ನುವ ಮಾತುಗಳು ಸಹ ಕೇಳಿಬಂದಿದೆ.ರಾಜಕೀಯವೇ ಬೇರೆ. ಕಾರ್ಯಕ್ರಮಗಳಲ್ಲಿ ಭಾಗಿಯಾವುದೇ ಬೇರೆ. ಎಲ್ಲಾದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳನ್ನು ಸಹ ವ್ಯಕ್ತಪಡಿಸಿದ್ದಾರೆ.ಈ ಎಲ್ಲಾ ಬೆಳವಣಿಗೆಗೆ ಖುದ್ದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾನು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಆದರೆ, ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಶಾ ಫೌಂಡೇಶನ್ ಸಂಸ್ಥೆಯವರು ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದಾರೆ. ನಾನು ಬರುವ ತನಕ ಕಾದು ಆಹ್ವಾನಿಸಿದ್ದಾರೆ. ಕಳೆದ ಬಾರಿ ನನ್ನ ಮಗಳು ಹೋಗಿದ್ದಳಂತೆ. ಈ ಬಾರಿ ನಾನು ಹೋಗುತ್ತಿದ್ದೇನೆ. ನಾನು ಬಿಜೆಪಿಯವರ ಜೊತೆ ಯಾವುದೇ ಸಂಪರ್ಕ ಇಲ್ಲ. ಜಗ್ಗಿ ವಾಸುದೇವ್ ನಮ್ಮ ಮೈಸೂರಿನವರು. ನನ್ನ ಮನೆಗೆ ಬಂದು ಆಹ್ವಾನಿಸಿದ್ದಾರೆ. ನಾನು ಇವತ್ತು ಇಶಾ ಪೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಪಾಪ ನಾನು ಇನ್ನೂ ಅಮಿತ್ ಶಾರನ್ನ ಭೇಟಿಯನ್ನೇ ಮಾಡಿಲ್ಲ. ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗೆ ಹತ್ತಿರ ಅಂತ ವೈರಲ್ ಮಾಡುತ್ತಿದ್ದಾರೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.