ಸಿದ್ದರಾಮಯ್ಯಗೆ ಹೈಕಮಾಂಡ್ನಿಂದ ದೆಹಲಿಗೆ ಬುಲಾವ್..!
ಬೆಂಗಳೂರು (ಅಕ್ಟೋಬರ್ 05); ರಾಜ್ಯದಲ್ಲಿ ಇನ್ನೂ ಒಂದೂವರೆ ವರ್ಷದಲ್ಲಿ ಚುನಾವಣೆ ಎದುರಾಗಲಿದೆ. ಈ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಏರಲೇಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಕಾಂಗ್ರೆಸ್ (Congress) ಹೊಂದಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ತುರ್ತು ಕಾಂಗ್ರೆಸ್ ನಾಯಕರಿಗೆ ಇದೆ.
ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಸಿದ್ದರಾಮಯ್ಯ ಹೊರತು ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ ಬೇರೆ ಯಾವುದೇ ದೊಡ್ಡ ಮಾಸ್ ಲೀಡರ್ (Mass Leader) ಇಲ್ಲ. ಹೀಗಾಗಿ ಕಾಂಗ್ರೆಸ್ ರಾಷ್ಟ್ರೀಯ ರಾಜಕಾರಣದಲ್ಲೂ ಸಿದ್ದರಾಮಯ್ಯ ಅವರನ್ನು ಮುನ್ನೆಲೆಗೆ ತರಬೇಕು ಎಂಬ ಮಾತುಗಳೂ ಚಾಲ್ತಿಯಲ್ಲಿವೆ. ಈ ಮಾತುಗಳ ನಡುವೆಯೇ ಕಾಂಗ್ರೆಸ್ ಹಂಗಾಮಿ ರಾಷ್ಟ್ರಾಧ್ಯಕ್ಷ ಸೋನಿಯಾ ಗಾಂಧಿ (Sonia Gandhi) ಬುಲಾವ್ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ಊಹಾಪೋಗಳಿಗೆ ಕಾರಣವಾಗಿದೆ.
ಸಿದ್ದು ದೆಹಲಿ ಭೇಟಿ ಹಿಂದಿದೆ ಹಲವು ಲೆಕ್ಕಾಚಾರ;
ಚುನಾವಣೆಗೆ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಲೇ ಬಂದಿದೆ. ರಾಷ್ಟ್ರ ಮಟ್ಟದಲ್ಲೂ ಕಾಂಗ್ರೆಸ್ ಬಲವರ್ಧನೆ ಸಲುವಾಗಿ ಶೀಘ್ರದಲ್ಲೇ ಎಐಸಿಸಿ ಪುನಾರಚನೆಗೆ ಚಿಂತನೆ ನಡೆಸಿರುವ ಸೋನಿಯಾ ಗಾಂಧಿ, ಇದೇ ಮೊದಲಬಾರಿಗೆ ಇಬ್ಬರು ಇಲ್ಲವೇ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.