
ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ದೇಶದ ಎರಡನೇ ಅತಿ ಉದ್ದದ ತೂಗುಸೇತುವೆಯನ್ನು ಸೋಮವಾರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಿದ್ದರು. ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ, ಸಚಿವರು ಮತ್ತು ಸಾಗರ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಈ ವಿಚಾರ ವಿಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ಜಟಾಪಟಿಗೆ ಕಾರಣವಾಗಿದೆ.
ಸಾಗರದ ಶಾಸಕರು ಹಾಗು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ”ಸೋಮವಾರ ಸೇತುವೆ ಉದ್ಘಾಟನೆ ಆಗಿದ್ದು ಖುಷಿಯಾಗಿದೆ. ಹಿಂದೆ ನಾನೇ ಹೋರಾಟ ಮಾಡಿ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದೆ. ಸೇತುವೆ ಬೇಗ ಮುಕ್ತಾಯ ಮಾಡಲು ನಾನು ಬೆಂಬಲ ನೀಡಿದ್ದೇನೆ. ಆದರೆ ಇಷ್ಟು ದೊಡ್ಡ ಯೋಜನೆ ಉದ್ಘಾಟನೆ ಹಾಗೂ ಎರಡು ಸಾವಿರ ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂಗೆ ತಡವಾಗಿ ಆಹ್ವಾನ ನೀಡಿದ್ದಾರೆ” ಎಂದು ಕಿಡಿಕಾರಿದರು.
ಕಾರ್ಯಕ್ರಮಕ್ಕೆ ಕನಿಷ್ಠ 15 ದಿನ ಮುಂಚೆ ಕರೆಯಬೇಕು: ”ನಮ್ಮ ಜಿಲ್ಲೆಯ ನರಿಬುದ್ಧಿ ಸಂಸದರು, ಸಿಎಂ ಬರಬಾರದು ಎಂದು ಹೀಗೆ ಮಾಡಿದ್ದಾರೆ. ಸಂಸದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಇಟ್ಟುಕೊಂಡು ನಮ್ಮನ್ನು ಬಿಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಮೂರು ದಿನ ಮುಂಚೆ ಆಹ್ವಾನ ಪತ್ರಿಕೆ ತಲುಪಿಸಿದ್ದಾರೆ. ಯಾಕೆ ಹೀಗೆ ಮಾಡಿದ್ರಿ?. ಕಾರ್ಯಕ್ರಮದಲ್ಲಿ ಸಿಎಂ ತೆರಿಗೆ ಕುರಿತು ಪ್ರಶ್ನೆ ಮಾಡುತ್ತಾರೆಂದು ರಾಜ್ಯ ಸರ್ಕಾರವನ್ನು ಬಿಟ್ಟು ಕಾರ್ಯಕ್ರಮ ಮಾಡಿದ್ದಾರೆ. ಸೇತುವೆ ಜಾಗ ಏನೂ ನಿಮ್ಮಪ್ಪನ ಮನೆಯ ಜಾಗವೇ. ಕಾರ್ಯಕ್ರಮಕ್ಕೆ ಕನಿಷ್ಠ 15 ದಿನ ಮುಂಚೆ ಕರೆಯಬೇಕು. ಆದರೆ ಮೂರು ದಿನ ಮುಂಚೆ ಆಹ್ವಾನ ಪತ್ರಿಕೆ ನೀಡಿದರೆ ಹೇಗೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜೊತೆಯಾಗಿ ಹೋಗಬೇಕಿದೆ” ಎಂದು ವಾಗ್ದಾಳಿ ನಡೆಸಿದರು.
ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ: ಮತ್ತೊಂದೆಡೆ, ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ”ಸಿಗಂದೂರು ಸೇತುವೆಯು ಅಧಿಕೃತವಾಗಿ ಉದ್ಘಾಟನೆ ಮಾಡಿದ ನಿತಿನ್ ಗಡ್ಕರಿ ಹಾಗೂ ಪ್ರಲ್ಹಾದ್ ಅವರಿಗೆ ಧನ್ಯವಾದಗಳು. ಸೋಮವಾರ ಭಾರಿ ಮಳೆ, ಮಳೆಯಂತೆಯೇ ಅಪಪ್ರಚಾರ. ಸೋಮವಾರ ಮಳೆಯಲ್ಲೂ ಸಹ ಜನ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳು” ಎಂದರು.”ಹತಾಶ ಮನೋಭಾವದಿಂದ ಸಿಎಂ ಅವರನ್ನೂ ಸಹ ಸಣ್ಣವರನ್ನಾಗಿ ನಮ್ಮ ಜಿಲ್ಲೆಯ ರಾಜಕಾರಣಿಗಳು ಮಾಡಿದ್ದಾರೆ. ನಾನು ಜೂನ್ 25ರಂದು ಗಡ್ಕರಿ ಅವರೊಂದಿಗೆ ಸೇತುವೆ ಉದ್ಘಾಟನೆ ಬಗ್ಗೆ ಮಾತನಾಡಿದ್ದೆ. ನೀರಿನ ಮಟ್ಟ ಹೆಚ್ಚಾದ್ರೆ ಲಾಂಚ್ ದಾಟಲು ಆಗಲ್ಲ. ಇದರಿಂದ ಸೇತುವೆ ಉದ್ಘಾಟನೆ ಮಾಡಲೇಬೇಕೆಂದು ವಿನಂತಿಸಿಕೊಂಡಾಗ ಅಧಿವೇಶನದ ನಂತರ ಬರಬಹುದೇ ಎಂದರು. ಆದರೆ ಇಲ್ಲ ಬೇಗ ಆಗಬೇಕು ಎಂದು ತಿಳಿಸಿದೆ” ಎಂದು ಹೇಳಿದರು.”ನಾನು ಸೇತುವೆಗೆ ಭೇಟಿ ನೀಡಿದ ನಂತರ ಸಚಿವರು ಹಾಗೂ ಶಾಸಕರು ಅಲ್ಲಿಗೆ ಹೋದಾಗ ಸಂತೋಷವಾಗಿತ್ತು. ಆದರೆ ಅಲ್ಲಿಗೆ ಹೋಗಿ ಇಬ್ಬರು ಬೇರೆ ತರಹದ ಹೇಳಿಕೆ ನೀಡಿದ್ದರು. ಸರ್ಕಾರದ ಪರವಾಗಿ ಬಂದ ಸತೀಶ್ ಜಾರಕಿಹೊಳಿ ಅವರಿಗೆ ಪ್ರಲ್ಹಾದ್ ಜೋಶಿ ಕರೆ ಮಾಡಿದಾಗ ಐದು ನಿಮಿಷಕ್ಕೆ ಬರುತ್ತೇನೆ ಎಂದವರು, ನಂತರ ವಾಪಸ್ ಹೋದರು. ಉಡುಗೂರೆಯನ್ನು ಸಹ ಅಧಿಕಾರಿಗಳು ವಾಪಸ್ ತೆಗೆದುಕೊಂಡು ಹೋಗಿದ್ದಾರೆ” ಎಂದರು.
ಶಿಷ್ಟಾಚಾರದ ಪ್ರಕಾರ ಮಾಡಿದ್ದೇವೆ: ”ನಿತಿನ್ ಗಡ್ಕರಿ ಅವರಿಗೆ ಅಗೌರವ ತೋರಿದ್ದಾರೆ. ಇದು ಶರಾವತಿ ಸಂತ್ರಸ್ತರಿಗೆ ಮಾಡಿದ ಅಗೌರವವಾಗಿದೆ. ಪ್ರತಿನಿತ್ಯ ಜನ ಜೀವ ಹಿಡಿದುಕೊಂಡು ಓಡಾಡುತ್ತಿರುವುದನ್ನು ತಪ್ಪಿಸಲು ಸೇತುವೆ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರೇ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರದ ಕಾರ್ಯಕ್ರಮವನ್ನು ನಾವು ನಮ್ಮ ಶಿಷ್ಟಾಚಾರದ ಪ್ರಕಾರ ಮಾಡಿದ್ದೇವೆ. ಸಿಎಂ ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿ. ಅವರ ಕೈಯಲ್ಲಿ ಇಂತಹ ಕೆಲಸವನ್ನು ನಮ್ಮ ಜಿಲ್ಲೆಯ ಸಚಿವರು ಮಾಡಿಸುತ್ತಿದ್ದಾರಲ್ಲಾ, ಇದರಿಂದ ನಮಗೆ ನೋವಾಗಿದೆ” ಎಂದು ಹೇಳಿದರು.