ಇತ್ತೀಚಿನ ಸುದ್ದಿಸುದ್ದಿ

ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್, ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ಹಿರಿಯ ಅಧಿಕಾರಿಗಳ ಸಭೆ

ಬೆಂಗಳೂರು : ಬೆಂಗಳೂರು ನಗರದಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಇಂದು ಸಿಎಂ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಿದ ಬಳಿಕ ಸ್ಥಳದಲ್ಲಿಯೇ ಅಗತ್ಯ ಸೂಚನೆ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ಹಿರಿಯ ಅಧಿಕಾರಿಗಳ ಸಭೆ ನಡಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಬೊಮ್ಮನಹಳ್ಳಿ, ಮಹದೇವಪುರ ವಲಯಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಈ ಎರಡು ವಲಯಗಳಲ್ಲಿ ತೀವ್ರ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಲಾಗಿದೆ. ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಬಹಳ ದೊಡ್ಡ ಪ್ರಮಾಣದ ಹಾನಿಯಾಗಿದೆ. ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಅಲ್ಲಿ ಚರಂಡಿಗಳ ಮುಂದುವರಿಕೆ ಇಲ್ಲ. ಮುಖ್ಯ ಚರಂಡಿ ಬಡಾವಣೆಯಲ್ಲಿ ಕೊಣೆಯಾಗಿದೆ. ಅದನ್ನೂ ಕೂಡ ತೆರವು ಮಾಡಿ ನೀರಿಗೆ ತನ್ನದೇ ಸಹಜ ಮಾರ್ಗಗಳನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದರು.

ಓಆರ್​ಆರ್ ರಸ್ತೆಯಲ್ಲಿ ನೀರು ನಿಂತು, ಕೆಳಗಿನ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನವಸತಿಗೆ ತೊಂದರೆಯಾಗಿದೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ, ಮಹದೇವಪುರ ವಲಯದಲ್ಲಿ 9 ಕಡೆ, ಹಾಗೂ ಬೊಮ್ಮನಹಳ್ಳಿಯಲ್ಲಿ 11 ಕಡೆ ತೊಂದರೆಯಾಗಿದೆ. ಅಲ್ಲಿನ ಸವಳಕೆರೆ ತುಂಬಿ ಹರಿದಿದ್ದು, ಬಹಳ ಸಮಸ್ಯೆಯಾಗಿದೆ. ಓಆರ್​ಆರ್ ರಸ್ತೆಯಾಗುವ ಹಂತದಲ್ಲಿ ಮುಖ್ಯ ಕಾಲುವೆ ಒಂದೆಡೆ ಕಟ್ಟಿಕೊಂಡಿದೆ. ನೀರು ನಿಲ್ಲಲು ಇರುವ ಎಲ್ಲಾ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದು, ಪೈಪ್​ಲೈನ್ ಅಳವಡಿಸಬೇಕು. ಹಾಗೂ ಓಆರ್​ಆರ್ ರಸ್ತೆಯಲ್ಲಿ ನಿಂತಿರುವ ನೀರನ್ನು ಹೊರಚೆಲ್ಲಬೇಕೆಂದು ಸೂಚಿಸಿರುವುದಾಗಿ ಹೇಳಿದರು.

ಬೊಮ್ಮನಹಳ್ಳಿಯಲ್ಲಿಯೂ ಕೆಲಸ ಪ್ರಾರಂಭವಾಗಿದ್ದು, ನೀರು ನಿಂತಿರುವಲ್ಲಿ ನೀರು ಹೊರಹಾಕಲು ಸೂಚಿಸಲಾಗಿದೆ. 122ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅವರಿಗೆ ಪರಿಹಾರ ನೀಡಲು ಕಂದಾಯ ಸಚಿವರು ಸಿದ್ಧತೆ ಮಾಡಿಕೊಂಡಿದೆ. ರಾಜ ಕಾಲುವೆ ನಿರ್ಮಾಣ ಕಾರ್ಯಕ್ಕೆ 1500 ಕೋಟಿ ರೂ. ನೀಡಿದ್ದು, ಅವುಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗಳು ಪ್ರಾರಂಭವಾಗಬೇಕು. ಕಳೆದ 6 ತಿಂಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಸಮಸ್ಯೆಯಾಗಿದೆ. ಕಳೆದ ಬಾರಿ ಯಲಹಂಕ, ಮಲ್ಲೇಶ್ವರಂ ಭಾಗದಲ್ಲಿ ಆಗಿದ್ದ ತೊಂದರೆ ಸರಿಪಡಿಸಿದ್ದರಿಂದ ಈ ಬಾರಿ ಸಮಸ್ಯೆಯಾಗಿಲ್ಲ. ಬರುವ ದಿನಗಳಲ್ಲಿ ಎಲ್ಲಾ ಅಡೆತಡೆ ನಿವಾರಿಸಲು ಸೂಚನೆ ನೀಡಲಾಗಿದೆ ಎಂದರು.

ಹೆಚ್ಚುವರಿ ಅನುದಾನ ಅಗತ್ಯವಿದ್ದರೆ, ಅನುದಾನ ಬಿಡುಗಡೆ ಮಾಡಲಾಗುವುದು ಎಂದ ಸಿಎಂ, ನಾಳೆ ಪರೀಕ್ಷೆ ಮಾಡಿ ಸ್ಥಳದಲ್ಲಿಯೇ ಸೂಚನೆ ನೀಡಲಾಗುವುದು. ಯಲಹಂಕದಲ್ಲಿ ಕೆಲಸ ಮಾಡಿದ್ದರಿಂದ ಈ ಬಾರಿ ತೊಂದರೆಯಾಗಿಲ್ಲ. ಕೆ.ಆರ್.ಪುರಂನಲ್ಲಿ ರೈಲ್ವೆ ಅನುಮತಿ ಪಡೆದು ಟೆಂಡರ್ ಕರೆದು ಕೆಲಸ ಪ್ರಾರಂಭವಾಗುತ್ತಿದೆ. ಹೊಸಕೆರೆಹಳ್ಳಿಯಲ್ಲಿಯೂ ಕೆಲಸ ಪ್ರಾರಂಭವಾಗಿದೆ. ಆಡಳಿತಾತ್ಮಕ ಅನುಮೋದನೆ ನೀಡಿ, ಅನುದಾನ ಬಿಡುಗಡೆಯೂ ಆಗಿದೆ ಎಂದು ತಿಳಿಸಿದರು.

ಬೆಳ್ಳಂದೂರು ಇಕೊಸ್ಪೇಸ್ ಹಾಗೂ ಆರ್​ಎಂಜೆಡ್ ಪ್ರದೇಶದಲ್ಲಿ ನೀರು ಸಂಗ್ರಹವನ್ನು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು. ತುರ್ತಾಗಿ ನೀರು ಸಂಗ್ರಹವಾಗಿರುವುದನ್ನು ತೆರವುಗೊಳಿಸಿ. ರೇನ್ಬೋ ಲೇಔಟ್​ನಲ್ಲಿ ನೀರು ತೆಗೆದು, ಮಳೆನೀರುಗಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಎಲ್ಲ ವಲಯಗಳ ಜಂಟಿ ಆಯುಕ್ತರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಜಲಮಂಡಳಿ, ಬೆಸ್ಕಾಂನೊಂದಿಗೆ ಸಮನ್ವಯ ವಹಿಸಿ ಕೆಲಸ ಮಾಡುವಂತೆ ಸೂಚಿಸಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button