ವಿಜಯಪುರ/ಹಾವೇರಿ: ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಿಂದಗಿ (Sindagi) ಮತ್ತು ಹಾನಗಲ್ (Hangal)ವಿಧಾನಸಭಾ ಕ್ಷೇತ್ರಗಳಿಗೆ (By Election) ಇಂದು ಚುನಾವಣೆ ನಡೆಯುತ್ತಿದೆ. ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸುತ್ತಿದ್ದು, ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೂರು ಪಕ್ಷಗಳಿಗೂ ಈ ಉಪ ಕದನ ಪ್ರತಿಷ್ಠೆಯಾಗಿದೆ. ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ಇವಿಎಂನಲ್ಲಿ ದಾಖಲಿಸುತ್ತಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಬಿಜೆಪಿಯಿಂದ ರಮೇಶ್ ಭುಸನೂರು ಮತ್ತು ಜೆಡಿಎಸ್ ನಿಂದ ನಾಜೀಯಾ ಅಂಗಡಿ ಕಣದಲ್ಲಿದ್ದಾರೆ. ಇತ್ತ ಹಾನಗಲ್ ನಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ವಿ ಮಾನೆ, ಬಿಜೆಪಿಯಿಂದ ಶಿವರಾಜ್ ಸಜ್ಜನ್ ಮತ್ತು ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧೆಯಲ್ಲಿದ್ದಾರೆ.
ಸಿಂದಗಿ ವಿಧಾನಸಭಾ ಕ್ಷೇತ್ರ
ಬೆಳಗ್ಗೆ ೭ರಿಂದ ಸಂಜೆ ೭ರ ವರೆಗೆ ಉಪ ಚುನಾವಣೆಯ ಮತದಾನ ನಡೆಯಲಿದೆ. ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಕೇಂದ್ರಗಳು ಆರಂಭಗೊಂಡಿದ್ದು, ಸಿಬ್ಬಂದಿ ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದ್ದಾರೆ. ಸಿಂದಗಿ ಚುನಾವಣೆಯಲ್ಲಿ ಒಟ್ಟು 2,34,584 ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
1,20,844 ಪುರುಷ ಮತದಾರರು, 1,13,561 ಮಹಿಳಾ ಮತದಾರರು, 32 ಇತರೆ, 147 ಸರ್ವಿಸ್ ವೋಟರಗಳು ಮತ ಚಲಾಯಿಸಲಿದ್ದಾರೆ. 271 ಮತದಾನ ಕೇಂದ್ರಗಳನ್ನು ಹಾಗೂ 26 ಆಕ್ಸಿಲರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ.