
ಮೈಸೂರು: ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣ ಬಳಸುವಾಗ ಮುನ್ನೆಚ್ಚರಿಕೆಯ ಜೊತೆಗೆ ಅಪರಿಚಿತರ ಸ್ನೇಹ ಮಾಡುವ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಕಿವಿಮಾತು ಹೇಳಿದರು.
ನಗರದ ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿ-ಕೇರ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ‘ಮಕ್ಕಳ ಬೇಸಿಗೆ’ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಹೆಣ್ಣುಮಕ್ಕಳಿಗೆ ಶಿಕ್ಷಣ ಅಗತ್ಯ. ಮದುವೆಗೂ ಮುನ್ನ ಶಿಕ್ಷಣ ಪಡೆದು ಉನ್ನತ ಸ್ಥಾನ ಮಾನ ಅಲಂಕರಿಸಿದರೆ ಯಾರ ಮೇಲೂ ಅವಲಂಬಿತರಾಗದ ಸ್ವಾಲಂಬಿಗಳಾಗಿ ಬದುಕ ಬಹುದು ಎಂದು ತಿಳಿಸಿದರು.ನಗರ ಪ್ರದೇಶಗಳಿಗೆ ಸೀಮಿತವಾಗಿರುವ ಬೇಸಿಗೆ ಶಿಬಿರಗಳನ್ನು ಪ್ರತಿ ಹಳ್ಳಿಯಲ್ಲೂ ನಡೆಸಬೇಕು. ಇದರಿಂದ ಹಳ್ಳಿ ಮಕ್ಕಳಿಗೂ ಉತ್ತಮ ವೇದಿಕೆ ಸಿಗಲಿದೆ. ಹೀಗಾಗಿ ಸರ್ಕಾರ ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು.
ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂಬ ನಂಬಿಕೆ ಅವರಿಗೆ ಇರುತ್ತದೆ. ಮಕ್ಕಳು ಅವರ ನಂಬಿಕೆಗೆ ಘಾಸಿಗೊಳಿಸದೆ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಆದಿವಾಸಿ ಮಕ್ಕಳನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಹಿರಿಯ ರಂಗಭೂಮಿ ತಜ್ಞೆ ಡಾ.ರಾಮೇಶ್ವರಿ ವರ್ಮಾ, ಮೈಸೂರು ಗ್ರಾಮಾಂತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ. ಎಂ. ಪ್ರಕಾಶ್, ಜೆ ಎಸ್ ಎಸ್ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಎಂ ಕಿಶೋರ್, ಸಂಸ್ಥೆಯ ನಿರ್ದೇಶಕ ಸ್ವಾನಿ, ವಿ-ಕೇರ್ ಸಂಸ್ಥೆಯ ಸಂಸ್ಥಾಪಕರಾದ ಡಾ.ಕುಮುದಿನಿ ಅಚ್ಚಿ ಉಪಸ್ಥಿತರಿದ್ದರು.