ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ಪಡೆದು ಕಾಂಗ್ರೆಸ್ ಯುವ ನಾಯಕಿಯಿಂದ ವಂಚನೆ ಆರೋಪ
ಬೆಂಗಳೂರು, ಜನವರಿ 29: ಯುವ ಕಾಂಗ್ರೆಸ್ ನಾಯಕಿ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಯುವ ಕಾಂಗ್ರೆಸ್ ನಾಯಕಿ ಸಂದ್ಯಾ ಪವಿತ್ರಾ ನಾಗರಾಜ್ ಎಂಬುವರು ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷ-ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಾಗಿರುವ ವೀಣಾ ಎಂಬುವರಿಗೆ ಸಂದ್ಯಾ ಪವಿತ್ರಾ ನಾಗರಾಜ್ ಅವರು ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಾರೆ. ವೀಣಾ ಅವರು ಸರ್ಕಾರಿ ಕೆಲಸ ಹುಡುಕುತ್ತಿರುವ ವಿಚಾರ ಸಂದ್ಯಾ ಅವರಿಗೆ ತಿಳಿದಿದೆ. ನಂತರ ಸಂದ್ಯಾ ಎಮ್ಎಸ್ ಬಿಲ್ಡಿಂಗ್ನಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ವೀಣಾ ಅವರಿಂದ 20 ಲಕ್ಷ ರೂ. ಹಣ ಪಡೆದಿದ್ದಾರೆ. ಆದರೆ ಇದೀಗ ಸಂದ್ಯಾ ಸರ್ಕಾರಿ ಕೆಲಸ ಕೊಡಿಸದೆ ಮತ್ತು ಹಣವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ವೀಣಾ ದೂರಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 2021ರಲ್ಲಿ ರಂಗಸ್ವಾಮಿ ಎಂಬುವವರು ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದು ಆ ಸಮಯದಲ್ಲಿ ಭಾನುಪ್ರಕಾಶ ಎಂಬುವವರು ಪರಿಚಯವಾಗಿದ್ದಾರೆ. ಅವರು ರಂಗಸ್ವಾಮಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹರೀಶ ಎಂಬುವವರನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ಹರೀಶ್ ರಂಗಸ್ವಾಮಿ ಅವರಿಂದ 3.50 ಲಕ್ಷ ಹಣವನ್ನು ಪಡೆದುಕೊಂಡು ಮತ್ತು ರಂಗಸ್ವಾಮಿ ಅವರ ಸಹೋದರಿ ರೂಪಾ. ಚಂದ್ರಶೇಖರ್ ಎಂಬುವುರಿಂದಲೂ 3.50 ಲಕ್ಷ ಹಣವನ್ನು ತೆಗೆದುಕೊಂಡಿದ್ದಾನೆ.
ಆದರೆ ಹರೀಶ್ ಕೆಲಸ ಕೊಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ರಂಗಸ್ವಾಮಿ ಅವರು ಹರೀಶ್ಗೆ ಕರೆ ಮಾಡಿ ವಿಚಾರಿಸಿದಾಗ, ಹರೀಶ್ “ನೀವು ನೀಡಿರುವ ಹಣವನ್ನು ನಾನು (ಹರೀಶ್) ಸಂದ್ಯಾ ಪವಿತ್ರ ನಾಗರಾಜ್ ರವರಿಗೆ ನೀಡಿದ್ದೇನೆ” ಎಂದು ಹೇಳಿದ್ದಾರೆ. ಬಳಿಕ ಹರೀಶ್ ರಂಗಸ್ವಾಮಿಯವರನ್ನು ಕರೆದುಕೊಂಡು ಹೋಗಿ ಸಂದ್ಯಾ ಪವಿತ್ರ ನಾಗರಾಜ್ ಅವರ ಪರಿಚಯ ಮಾಡಿಸಿದ್ದಾರೆ. ನಂತರ ಸಂದ್ಯಾ ನಾಗರಾಜ್ ಅವರು ನಿಮಗೆ ಹಣ ವಾಪಸ್ ಕೊಡುವುದಿಲ್ಲ.
ಇನ್ನೂ 7,70,000 ರೂ. ಹಣವನ್ನು ನೀಡಿದರೆ ನಿಮಗೂ (ರೂಪಾ. ಚಂದ್ರಶೇಖರ್) ಮತ್ತು ತಮ್ಮ ರಂಗಸ್ವಾಮಿಗೂ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಬಳಿಕ ರೂಪಾ ಮತ್ತು ರಂಗಸ್ವಾಮಿ ಹಂತ ಹಂತವಾಗಿ ಸುಮಾರು 7,70,000 ರೂ. ಹಣವನ್ನು ಸಂದ್ಯಾ ಪವಿತ್ರಾ ನಾಗರಾಜ್ಗೆ ನೀಡಿದ್ದಾರೆ. ಬಳಿಕ ರಂಗಸ್ವಾಮಿ ಮತ್ತು ಪವಿತ್ರ ನಾಗರಾಜ್ ಅವರು ಕೆಲಸದ ಬಗ್ಗೆ ಮತ್ತು ಹಣದ ಬಗ್ಗೆ ಸಂದ್ಯಾ ಅವರಿಗೆ ವಿಚಾರಿಸಿದ್ದಾರೆ. ಆಗ ಸಂದ್ಯಾ ಇಲ್ಲ, ಸಲದ ಸಬೂಬು ಹೇಳುತ್ತಾ ದಿನಗಳನ್ನು ಮುಂದೆ ಹಾಕಿದ್ದಾರೆ. ಪೋನ್ ಸ್ವಿಚ್ ಆಫ್ ಮಾಡಿದ್ದಾರೆ. ಅಲ್ಲದೇ ಕೊಟ್ಟಿರುವ ಹಣವನ್ನು ವಾಪಸ್ ಕೇಳಿದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆಂದು ಸಂದ್ಯಾ ರಂಗಸ್ವಾಮಿ ಮತ್ತು ರೂಪಾ. ಚಂದ್ರಶೇಖರ್ಗೆ ಬೆದರಿಕೆ ಹಾಕಿದ್ದಾರೆ.
ಸಂದ್ಯಾ ಪವಿತ್ರ ನಾಗರಾಜ್ ಸುಮಾರು 11,20,000 ರೂ. ಪಡೆದುಕೊಂಡು ಸರಕಾರಿ ಕೆಲಸವನ್ನು ಕೊಡಿಸದೆ ಹಣವನ್ನು ವಾಪಸ್ ನೀಡದೆ ನಂಬಿಸಿ ಮೋಸ ಮಾಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುಪ್ರಕಾಶ, ಹರೀಶ್ ಮತ್ತು ಸಂದ್ಯಾ ಪವಿತ್ರ ನಾಗರಾಜ್ ವಿರುದ್ಧ ರೂಪಾ. ಚಂದ್ರಶೇಖರ್ ದೂರು ನೀಡಿದ್ದಾರೆ.