ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಹೊಸ ರೂಲ್ಸ್, ಸಿ.ಎಂ ಆದೇಶದಲ್ಲಿ ಏನಿದೆ
ರಾಜ್ಯದ ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹಾಗೂ ಆಡಳಿತಾತ್ಮಕ ಬದಲಾವಣೆಗಳು ಸದಾ ಚರ್ಚೆಯಾಗುತ್ತಿರುತ್ತವೆ. ಇದೀಗ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಚಾರ ಮಹತ್ವದ ಆದೇಶವೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ವಿಚಾರದಲ್ಲಿ ದಂಧೆ ನಡೆಯುತ್ತಿದೆ ಹಾಗೂ ಆಪ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಈ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದೆ.
ಈ ಸಂಬಂಧ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಿಪ್ಪಣಿ ದಿನಾಂಕ: 03.01.2024 ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯ ಅನುಸಾರ. ದಿನಾಂಕ 31.08.2023ರಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿರುವುದರಿಂದ ಇನ್ನು ಮುಂದ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅತ್ಯಗತ್ಯವಾಗಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೂರ್ವಾನುಮೋದನೆಯನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಒಂದು ವೇಳೆ ಯಾವುದೇ ಇಲಾಖೆಯಲ್ಲಿ ಪೂರ್ವಾನುಮೋದನೆ (ವರ್ಗಾವಣೆ ಮಾಡುವುದಕ್ಕೂ ಮೊದಲು ಅನುಮತಿ)ಯನ್ನು ಪಡೆಯದೇ, ಯಾವುದೇ ವರ್ಗಾವಣೆಗಳನ್ನು ಮಾಡಿದಲ್ಲಿ ಸಂಬಂಧಪಟ್ಟ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು ಹಾಗೂ ಇಲಾಖೆಯ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು. ಅಲ್ಲದೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದ್ದರೂ, ಈ ನಿರ್ದೇಶನವನ್ನು ಉಲ್ಲಂಘಿಸಿ, ಪದೇ ಪದೇ ಘಟನೋತ್ತರ ಅನುಮೋದನ ಕೋರಿ ಕಡತಗಳನ್ನು ಸಲ್ಲಿಸುತ್ತಿರುವುದನ್ನು ಗಮನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶದಲ್ಲಿ ಉಲ್ಲೇಖ ಮಾಡಿದ್ದಾರೆ.
ಹೀಗಾಗಿ, ಈ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಯಾವುದೇ ವರ್ಗಾವಣೆ ಕಡತಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನ ಇಲ್ಲದ ಹೊರಡಿಸಬಾರದು. ಅಲ್ಲದೆ ಇನ್ನು ಮುಂದೆ ಕಡತಗಳನ್ನು ಘಟನೋತ್ತರ ಅನುಮೋದನೆಗೆ ಮಂಡಿಸದಂತೆ, ಸ್ಪಷ್ಟವಾಗಿ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಗಳಿಗೆ ಸೂಚಿಸುವಂತೆ ತಿಳಿಸಲಾಗಿದೆ ಎಂದು ಸಿ.ಎಂ ಅವರು ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ವರ್ಗಾವಣೆ: ರಾಜ್ಯದಲ್ಲಿ ಯಾವುದೇ ಇಲಾಖೆಯಲ್ಲಾದರೂ ಅಧಿಕಾರಿಗಳ ವರ್ಗಾವಣೆಗೆ ಈ ಆದೇಶ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ ಎನ್ನಲಾಗಿದ್ದ ವಿಡಿಯೋವೊಂದು ಭಾರೀ ವೈರಲ್ ಆದ ಮೇಲೆ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷಗಳು ಇದನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡಿದ್ದವು.
ಇದಾದ ಮೇಲೆ ಸರ್ಕಾರವು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇರಿಸುತ್ತಿದೆ. ಈಗಾಗಲೇ ಹಲವು ಬಾರಿ ನಿರ್ದೇಶನ ನೀಡಲಾಗಿದ್ದರೂ ಅದರ ಸಮರ್ಪಕ ಪಾಲನೆಯಾಗುತ್ತಿಲ್ಲ ಎಂದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಲ್ಲೇಖಿಸಿದ್ದಾರೆ. ಹೀಗಾಗಿ, ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️