ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದ ಮುಡಾ ಸೈಟುಗಳನ್ನು ಮತ್ತೆ ಕೇಳಲಿದ್ದಾರೆ ಸಿದ್ದರಾಮಯ್ಯ ಪತ್ನಿ – ಡಾ. ಯತೀಂದ್ರ ಸುಳಿವು!

ತುಮಕೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ತಮ್ಮ ಕುಟುಂಬ ಅಕ್ರಮವಾಗಿ ಸೈಟುಗಳನ್ನು ಪಡೆದ ಆರೋಪಕ್ಕೆ ಗುರಿಯಾದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿಎಂ ಪಾರ್ವತಿಯವರು ಆ ಸೈಟುಗಳನ್ನು ಮುಡಾಕ್ಕೆ ಹಿಂದಿರುಗಿಸಿದ್ದರು. ಆದರೆ, ಅದೇ ಸೈಟುಗಳನ್ನು ಅವರು ಮತ್ತೆ ಕ್ಲೈಮ್ ಮಾಡಲಿದ್ದಾರೆ ಎಂದು ಹೇಳಿದ್ದಾರೆ.ಸೈಟು ಹಂಚಿಕೆಯಲ್ಲಿ ಅಕ್ರಮ ಕೇಳಿಬಂದ ಹಿನ್ನೆಲೆಯಲ್ಲಿ ತಮ್ಮ ತಾಯಿಯವರು ಮುಡಾಕ್ಕೆ ಹಿಂದಿರುಗಿಸಿದ್ದ ಸೈಟುಗಳನ್ನು ಮತ್ತೆ ಕ್ಲೈಮ್ ಮಾಡಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮುಡಾ ಹಗರಣದ ತನಿಖೆ ನಡೆಯುತ್ತಿದೆ. ನಿಜ ಹೇಳಬೇಕೆಂದರೆ, ಈ ಸೈಟುಗಳಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮವಾಗಿಲ್ಲ. ಅದು ತನಿಖೆಯಲ್ಲಿ ಗೊತ್ತಾಗಲಿದೆ. ನಮ್ಮ ಕುಟುಂಬ ಆರೋಪ ಮುಕ್ತವಾಗಲಿದೆ. ಆಗ ಮುಡಾಕ್ಕೆ ಹಿಂದಿರುಗಿಸಲಾಗಿದ್ದ ಸೈಟುಗಳನ್ನು ಮತ್ತೆ ನಮ್ಮ ತಾಯಿ (ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿಎಂ ಪಾರ್ವತಿ) ಹಿಂದಕ್ಕೆ ಪಡೆಯಲಿದ್ದಾರೆ ಎಂದು ಯತೀಂದ್ರ ತಿಳಿಸಿದ್ದಾರೆ.“ಕಾನೂನಾತ್ಮಕವಾಗಿ ನಾವು ಈಗಲೂ ಮುಡಾ ಸೈಟುಗಳ ಮೇಲೆ ಅಧಿಕಾರ ಹೊಂದಿದ್ದೇವೆ. ಆದರೆ, ತನಿಖೆಗೆ ಸಹಕರಿಸುವ ಉದ್ದೇಶದಿಂದ ವಿವಾದಕ್ಕೆ ಒಳಗಾಗಿದ್ದ ಸೈಟುಗಳನ್ನು ನಾವು ಮುಡಾಕ್ಕೆ ಹಿಂದಿರುಗಿಸಿದ್ದೇವೆ. ತನಿಖೆ ಮುಗಿದ ನಂತರ ಸೈಟುಗಳನ್ನು ನಮ್ಮ ತಾಯಿ ಮರಳಿ ಪಡೆಯಲು ಪ್ರಯತ್ನಿಸುತ್ತಾರೆ’’ ಎಂದು ಹೇಳಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮ
“ಮುಡಾದಲ್ಲಿ ಒಂದು ವೇಳೆ ಅಕ್ರಮವಾಗಿರುವಂಥ ಘಟನೆಗಳೇನಾದರೂ ನಡೆದಿದ್ದರೆ ಅದು ಅಧಿಕಾರಿಗಳ ತಪ್ಪಿನಿಂದ ಆಗಿರುವಂಥದ್ದು’’ ಎಂಬರ್ಥದಲ್ಲಿ ಮಾತನಾಡಿದ ಯತೀಂದ್ರ, ಈಗಾಗಲೇ ಮುಡಾ ಶುದ್ಧೀಕರಣಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾದರಿಯಲ್ಲಿ ಮುಡಾವನ್ನು ಬದಲಾವಣೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಮುಂದೆ, ಮುಡಾ ಆಡಳಿತ ಮಂಡಳಿಯಲ್ಲಿ ಯಾವುದೇ ಜನಪ್ರತಿನಿಧಿಗಳು ಇರುವುದಿಲ್ಲ. ಕೇವಲ ಸರ್ಕಾರದಿಂದ ನಾಮನಿರ್ದೇಶನಗೊಂಡವರು ಮಾತ್ರ ಇರುತ್ತಾರೆ. ಮುಡಾ ಅಕ್ರಮಗಳ ಬಗ್ಗೆ ಈಗಗಾಲೇ ಸ್ವತಂತ್ರ್ಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಾಗುತ್ತಿದ್ದು, ಅದರ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’’ ಎಂದು ತಿಳಿಸಿದರು.ಎರಡು ದಿನಗಳ ಹಿಂದಷ್ಟೇ, ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಮುಡಾ ಕೇಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿ.ಎಂ. ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ವಿಚಾರಣೆಗೆ ಬರುವಂತೆ ಸೂಚಿಸಿ ಇ.ಡಿ. ವತಿಯಿಂದ ಸಮನ್ಸ್ ಜಾರಿಯಾಗಿತ್ತು. ಸಮನ್ಸ್ ರದ್ದುಗೊಳಿಸಬೇಕೆಂದು ಕೋರಿ ಪಾರ್ವತಿ ಹಾಗೂ ಭೈರತಿ ಸುರೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ನಾಗಪ್ರಸನ್ನ ಅವರುಳ್ಳ ಪೀಠ, ಸಮನ್ಸ್ ರದ್ದುಗೊಳಿಸಿತು.