ಸದ್ಯಕ್ಕಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ?
ಎರಡು ಸ್ಥಾನಗಳ ಆಯ್ಕೆ ಸಂಬಂಧ ಇನ್ನೂ ಬಿಜೆಪಿ ಹೈಕಮಾಂಡ್‌ನಲ್ಲಿ ಯಾವುದೇ ನಿಲುವು ಸ್ಪಷ್ಟವಾಗಿಲ್ಲ. ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿರಿಸಿಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಸದನದ ಒಳಗೆ ಸರ್ಕಾರದ ಗ್ಯಾರಂಟಿಗಳನ್ನು ಪ್ರಶ್ನಿಸಬೇಕು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ದಾಖಲೆಗಳನ್ನು ಹಿಡಿದು ಸರ್ಕಾರದ ಹುಳುಕನ್ನು ಜನರ ಮುಂದಿಡಬೇಕು. ಇನ್ನೊಂದೆಡೆ ರಾಜ್ಯಾಧ್ಯಕ್ಷರು ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕು. ಈ ಎಲ್ಲ ರೀತಿಯಲ್ಲಿ ಯಾರು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೊಡಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ವರಿಷ್ಠರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಾಧ್ಯತೆ ಕಡಿಮೆ ಇದೆ. ಆಕಾಂಕ್ಷಿಗಳ ಹಾಗೂ ಸಂಭಾವ್ಯರ ಹೆಸರನ್ನು ವರಿಷ್ಠರು ಪಡೆದಿದ್ದಾರೆ. ಮೊದಲು ಎರಡೂ ಸದನಗಳಿಗೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವ ಯೋಚನೆ ಮಾಡಿಕೊಳ್ಳಲಾಗಿದೆ. ಅದರ ಆಧಾರದಲ್ಲಿ ರಾಜ್ಯಾಧ್ಯಕ್ಷರ ಬಗ್ಗೆ ನಿರ್ಧಾರ ಮಾಡಲಾಗುವುದು. ವಿಪಕ್ಷ ನಾಯಕರಾಗಿ ಯಾವ ಸಮುದಾಯ, ಯಾವ ಬಣದವರು ಆಯ್ಕೆ ಆಗುತ್ತಾರೆ ಎನ್ನುವುದರ ಆಧಾರದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಇದೆಲ್ಲದರ ನಡುವೆ ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಸಿ.ಟಿ. ರವಿ ಬೀಡುಬಿಟ್ಟಿದ್ದಾರೆ.
ತಾಂತ್ರಿಕವಾಗಿ ಈಗ ವಿಪಕ್ಷ ನಾಯಕ ಸ್ಥಾನ ಮಾತ್ರ ಖಾಲಿ ಇದೆ ಎಂದು ವರಿಷ್ಠರು ಹೇಳಿರುವುದರ ಹಿಂದೆ ಏನಿದೆ ಲೆಕ್ಕಾಚಾರ ಎಂಬುದು ಬಿಜೆಪಿ ಪಾಳಯದಲ್ಲಿ ಈಗ ಬಹು ಚರ್ಚಿತ ವಿಷಯವಾಗಿದೆ. ಈ ಮೂಲಕ ಬಿಜೆಪಿ ವರಿಷ್ಠರು ಎಲ್ಲರ ತಲೆಯೊಳಗೆ ಹೊಸ ಹುಳವೊಂದನ್ನು ಬಿಟ್ಟಿದ್ದಾರೆ. ತಾಂತ್ರಿಕವಾಗಿ ಖಾಲಿ ಎಂದರೆ ಅದು ವಿಪಕ್ಷ ನಾಯಕನ ಸ್ಥಾನ ಮಾತ್ರ. ಈಗ ನಳಿನ್ ಕುಮಾರ್ ಕಟೀಲ್ ಅವರು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ ಈ ಹುದ್ದೆ ತಾಂತ್ರಿಕವಾಗಿ ಖಾಲಿ ಇಲ್ಲ ಎಂದೆಲ್ಲ ಚರ್ಚೆಗಳು ನಡೆದಿವೆ. ಅಂದರೆ ರಾಜ್ಯಾಧ್ಯಕ್ಷರ ಕುರಿತು ಚರ್ಚೆಯೇ ಆಗಿಲ್ಲವೇ? ನಳಿನ್ ಕುಮಾರ್ ಕಟೀಲ್ ಅವರೇ ಮುಂದುವರಿಯುತ್ತಾರೆಯೇ? ಎಂಬಿತ್ಯಾದಿ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ.