ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ: ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಮುಂದುವರಿಕೆ.
ಕೊಲಂಬೊ: ದೇಶದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ನಡೆದ ದಿಢೀರ್ ರಾಜಕೀಯ ಬೆಳವಣಿಯಲ್ಲಿ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಹೊರತುಪಡಿಸಿ ಸಂಪುಟದ ಎಲ್ಲಾ ಸಚಿವರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ ಅನ್ನೋದು ಗಮನಾರ್ಹ. ನಮನ್ ರಾಜಪಕ್ಸ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯಕ್ಕೆ ಶ್ರೀಲಂಕಾದಲ್ಲಿ ಅರಾಜಕತೆ ತಲೆದೋರಿದೆ. ಕೋವಿಡ್ -19 ಕಾರಣದಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ ಪರಿಣಾಮ ವಿದೇಶಿ ವಿನಿಮಯ ಕೊರತೆಯನ್ನು ದೇಶ ಎದುರಿಸುತ್ತಿದೆ. ಅಷ್ಟೇ ಅಲ್ಲದೆ, ನಾಗರಿಕರು ಅಗತ್ಯ ಆಹಾರ ವಸ್ತುಗಳು, ಇಂಧನ ಮತ್ತು ಅನಿಲದ ಕೊರತೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ದೇಶದ ಪಶ್ಚಿಮ ಪ್ರಾಂತ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಈ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾತ್ರಿ 644 ಜನರನ್ನು ಬಂಧಿಸಲಾಗಿದೆ.