ಶ್ರೀನಿವಾಸಪುರಕ್ಕೆ ಬಂದು ನಿನ್ನ ಕಥೆ ಬಿಚ್ಚಿಡುತ್ತೇನೆ ಹುಷಾರ್! ಎಂದು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ವಾಗ್ದಾಳಿ
ಕೋಲಾರ: ಮಿಸ್ಟರ್ ರಮೇಶ್ ಕುಮಾರ್, ಇನ್ನು ಮುಂದೆ ನಿನ್ನ ಆಟ ನಡೆಯುವುದಿಲ್ಲ. ನಿನ್ನ ಬುದ್ಧಿವಂತತನ ಏನು ಕೆಲಸ ಮಾಡುವುದಿಲ್ಲ. ಶ್ರೀನಿವಾಸಪುರಕ್ಕೆ ಬಂದು ನಿನ್ನ ಕಥೆ ಬಿಚ್ಚಿಡುತ್ತೇನೆ ಹುಷಾರ್! ಎಂದು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ತಾಳ್ಮೆಗೂ ಒಂದು ಕೊನೆಯಿರುತ್ತದೆ. ನಾನು ಎಷ್ಟು ಅಂತ ಸಹಿಸಿಕೊಳ್ಳಲಿ. ಚುನಾವಣೆಗೆ ಇನ್ನು 365 ದಿನಗಳು ಬಾಕಿಯಿದ್ದು, ಮುಂದಿನ ದಿನಗಳಲ್ಲಿ ನಾನೇನು ಎಂಬುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದಲ್ಲಿ 8 ಬಾರಿ ಗೆಲುವು ಸಾಧಿಸಿರುವುದು ಬಾಬು ಜಗಜೀವನ್‌ರಾಮ್ ಮಾತ್ರವೇ. ಆದರೆ, ತಾನು ಏಳು ಬಾರಿ ಗೆಲುವು ಸಾಧಿಸಿರುವುದನ್ನು ಸಹಿಸಲಾಗದೇ ಅದಕ್ಕೊಂದು ಚಕ್ರವ್ಯೂಹ ತಯಾರು ಮಾಡಿ ಸೋಲಿಸಲು ಪಣತೊಟ್ಟಿದ್ದು ನೀವಲ್ಲವೇ? ಎಂದು ಗುಡುಗಿದರು.
ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಕಷ್ಟಪಟ್ಟಿದ್ದೇನೆ, ಕೆಲವರನ್ನು ಗೆಲ್ಲಿಸುವುದಕ್ಕೆ ನಾನು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ತನು, ಮನ, ಧನ ಎಲ್ಲವನ್ನೂ ಧಾರೆ ಎರೆದಿದ್ದೇನೆ. ನಿನ್ನ ಜತೆಯಲ್ಲಿರುವ ಒಬ್ಬೊಬ್ಬರ ಕಥೆಯನ್ನು ಬಿಚ್ಚಿಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಶ್ರೀನಿವಾಸಪುರದಲ್ಲಿಯೇ ನಿನ್ನ ಕಥೆ ಬಿಚ್ಚಿಡುತ್ತೇನೆ. ನಿನ್ನ ಕಥೆ ಏನು, ನೀನು ಎಲ್ಲಿದ್ದೇ, ನಿನ್ನನ್ನು ಕಾಂಗ್ರೆಸ್‌ಗೆ ಯಾರು ಕರೆ ತಂದರು. ನಾನೇನು ಸಹಾಯ ಮಾಡಿದ್ದೀನಿ, ಎಲ್ಲವನ್ನ ಹೇಳುತ್ತೇನೆ ಮಿಸ್ಟರ್ ರಮೇಶ್‌ಕುಮಾರ್. ಇನ್ನು ಮುಂದೆ ಸುಮ್ಮನೇ ಕುಳಿತುಕೊಳ್ಳುವುದಿಲ್ಲಎಂದು ಕಿಡಿಕಾರಿದರು.
ಹೈಕಮಾಂಡ್ ಮುನಿಯಪ್ಪರವರೇ ಸಮಾಧಾನವಾಗಿ ಹೋಗಿ, ನಿಮಗೆ ಸೋಲಾಗಿದೆ. ನಿಜ. ಆದರೆ, ನೀವು ರಾಷ್ಟ್ರ ನಾಯಕರಾಗಿರುವುದರಿಂದ ಒಂದು ಕ್ಷೇತ್ರವನ್ನು ನೋಡಿಕೊಂಡಿರುವುದು ಸರಿಯಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ಪ್ರಯತ್ನಿಸಿ ಎಂಬ ಮಾತಿಗೆ ಬೆಲೆ ಕೊಟ್ಟು ಪಕ್ಷ ಸಂಘಟಿಸುತ್ತಿದ್ದೇನೆ ಎಂದು ಹೇಳಿದರು.
ತಾಳ್ಮೆಗೂ ಒಂದು ಮಿತಿಯಿದೆ!
ಆದರೆ, ತಾಳ್ಮೆಗೂ ಒಂದು ಮಿತಿಯಿರುತ್ತದೆ. ಎಷ್ಟು ಜನರನ್ನು ಹಾಳು ಮಾಡುತ್ತೀಯಪ್ಪಾ ರಮೇಶ್ ಕುಮಾರ್, ನಾನು ಬೆಳೆಸಿದವರನ್ನು ನಿನ್ನ ಸ್ವಾರ್ಥಕ್ಕೆ ಹಾಳು ಮಾಡುತ್ತಿದ್ದೀಯಾ, ನೀನು ಸೋಲುತ್ತೀಯಾ ಅಂತೇಳಿ ಎಲ್ಲರನ್ನೂ ಕಟ್ಟಿಕೊಂಡು ಒಂದು ಬಾವಿಗೆ ಹಾಕಬೇಕು ಎಂದು ತೀರ್ಮಾನಿಸಿದ್ದೀಯಾ? ಎಂದು ಟೀಕಿಸಿದರು.