ರಾಜ್ಯ

ಶೀಘ್ರದಲ್ಲೇ ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ : ಬಿ.ಸಿ.ಪಾಟೀಲ್

ಬೆಂಗಳೂರು,ಸೆ.24 : ಕೃಷಿ ವಿವಿಗಳಲ್ಲಿ ಖಾಲಿ ಇರುವ ಶೇ.50ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಶೀಘ್ರವೇ ನೇಮಕಾತಿ ಪ್ರಕ್ರಿಯೆ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ವಿಧಾನಪರಿಷತ್ನಲ್ಲಿ ಸದಸ್ಯರಾದ ಅರವಿಂದಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಜಿಲ್ಲೆಗೆ ಒಂದು ಕೃಷಿ ಕಾಲೇಜು ಇರಬೇಕೆಂಬ ನಿಯಮವಿದೆ. ಆರ್ಥಿಕ ಪರಿಸ್ಥಿತಿ ಆಧರಿಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೃಷಿ, ತೋಟಗಾರಿಕೆ ವಿವಿ ಸೇರಿದಂತೆ ಕೃಷಿಗೆ ಸಂಬಂಧಪಟ್ಟ ವಿವಿಗಳು ಒಂದೇ ಕಡೆ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದಾಗ , ಬಿಸಲಯ್ಯ ಅವರ ಸಮಿತಿ ಕೂಡ ಇದೇ ರೀತಿ ಶಿಫಾರಸು ಮಾಡಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೂ ಚರ್ಚೆ ಮಾಡಿದ್ದೇವೆ.
ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವುದು ಅಥವಾ ಒಂದೇ ಕಡೆ ಸ್ಥಾಪಿಸುವ ಬಗ್ಗೆ ಸಮಾಲೋಚನೆ ಮಾಡಲಾಗುವುದು. ಎಲ್ಲವು ಒಂದೇ ಕಡೆ ಇದ್ದರೆ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ವಿವಿ ಸ್ಥಾಪಿಸಬೇಕಾದರೆ ಕನಿಷ್ಠ 75 ಎಕರೆ ಭೂಮಿ ಬೇಕು.
ಭೂಮಿ ಲಭ್ಯ ಇರುವ ಕಡೆ ಕೃಷಿ ವಿವಿಗಳನ್ನು ವಿಲೀನಗೊಳಿಸಲು ಪರಿಶೀಲನೆ ನಡೆಸಲಾಗುವುದು. ಇರುವ ಕಾಲೇಜು ಮತ್ತು ವಿವಿಗಳಲ್ಲಿ ಬೋಧಕರ ಕೊರತೆ ಇದೆ. ಹೆಚ್ಚುಗಾರಿಕೆಗೆ ಜಿಲ್ಲೆಗೊಂದು ಕಾಲೇಜು ಸ್ಥಾಪಿಸಿ, ಕಾಟಾಚಾರಕ್ಕೆ ಶೈಕ್ಷಣಿಕ ಸಂಸ್ಥೆ ನಡೆಸಲು ಸರ್ಕಾರಕ್ಕೆ ಇಷ್ಟ ಇಲ್ಲ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button