Travelಇತ್ತೀಚಿನ ಸುದ್ದಿರಾಜ್ಯಸುದ್ದಿ

ಶಿರಾಡಿ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಪಿಆರ್‌ ರೆಡಿ.

ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕೊಂಡಿಯಾಗಿರುವ ಶಿರಾಡಿಯ 23.63 ಕಿ.ಮೀ ಮಾರ್ಗದಲ್ಲಿ ಆರು ಕಡೆ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಪಿಆರ್‌ ಸಿದ್ಧಪಡಿಸಿದ್ದು, ಕೇಂದ್ರ ಸರಕಾರಕ್ಕೆ ಸಲ್ಲಿಸಲು ಮುಂದಾಗಿದೆ. ಪ್ರಸ್ತುತ ಹಾಸನ-ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುರಂಗ ಮಾರ್ಗವಿದ್ದು, ಶಿರಾಡಿ ಸುರಂಗ ಮಾರ್ಗ ಆಗಿದ್ದೇ ಆದಲ್ಲಿ ಜಿಲ್ಲೆಗೆ ಎರಡನೇ ಸುರಂಗ ಮಾರ್ಗದ ರಸ್ತೆಯಾಗಲಿದೆ.ಶಿರಾಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ವರದಿ ಆಧರಿಸಿ ನೀಡಿದ ವಿಸ್ಕೃತ ವರದಿ ಅನ್ವಯ ಕೇಂದ್ರ ಅನುಮೋದನೆ ನೀಡಿದೆ. 12.60 ಕಿ.ಮೀ ಉದ್ದದ ಆರು ಸುರಂಗ ಮಾರ್ಗ, 1.5 ಕಿ.ಮೀ ಉದ್ದದ 10 ಸೇತುವೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮಾರ್ಗದಲ್ಲಿ ದ್ವಿಮುಖ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡುವ ಜತೆಗೆ ತುರ್ತು ಸಂದರ್ಭಕ್ಕಾಗಿ 8.58 ಮೀ. ವಿಸ್ತಾರದ ತುರ್ತು ಮಾರ್ಗವೂ ಯೋಜನೆಯಲ್ಲಿ ಒಳಗೊಂಡಿದೆ. ಶಿರಾಡಿ ಸುರಂಗ ಮಾರ್ಗದ ಕಾಮಗಾರಿಗೆ ಜಪಾನ್‌ ಇಂಟರ್‌ ನ್ಯಾಷನಲ್‌ ಕೋ ಆಪರೇಷನ್‌ ಏಜೆನ್ಸಿ(ಜೆಐಸಿಎ) ಆರ್ಥಿಕ ನೆರವು ಒದಗಿಸಲಿದೆ.

ಸುರಂಗ ಮಾರ್ಗದ ಚಿಂತನೆ ಒಂದೆಡೆಯಾದರೆ ಹಿಂದಿನ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತ, ಅನಾಹುತದಿಂದ ಎಚ್ಚೆತ್ತು ಶಿರಾಡಿ ಮಾರ್ಗದ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಭೂಕುಸಿತ, ಸಂಚಾರ ಸ್ಥಗಿತ ಸಮಸ್ಯೆ ಮರುಕಳಿಸುತ್ತಲೇ ಇರುವುದನ್ನು ಮನಗಂಡು ಈಗಾಗಲೇ ಚತುಷ್ಪಥ ರಸ್ತೆ ಹಾಗೂ ಸಕಲೇಶಪುರದಿಂದ ಮಾರನಹಳ್ಳಿವರೆಗೂ ಅಲ್ಲಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಹಗಲು-ರಾತ್ರಿ ಈ ಕಾಮಗಾರಿ ಮಾಡುವ ಮೂಲಕ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ಹಾಸನ-ಮಂಗಳೂರು ನಡುವೆ ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ನಿತ್ಯ ನೂರಾರು ಟ್ಯಾಂಕರ್‌, ಟ್ರಕ್‌, ಬಸ್‌ ಮತ್ತಿತರ ವಾಹನಗಳು ಸಂಚರಿಸುತ್ತಿವೆ. ವಾಹನ ದಟ್ಟಣೆಗೆ ತಕ್ಕನಾಗಿ ರಸ್ತೆ ವ್ಯವಸ್ಥೆ ಇಲ್ಲದೆ ಪದೇಪದೆ ಅಪಘಾತ, 12ರಿಂದ 16 ಗಂಟೆ ಸಂಚಾರ ಸ್ಥಗಿತದ ಉದಾಹರಣೆ ಕೂಡ ಇದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಶಿರಾಡಿ ರಸ್ತೆಯ ಮೂಲಕ ಮಂಗಳೂರು ಬಂದರು ಸಂಪರ್ಕ, ಧರ್ಮಸ್ಥಳ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡದ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ಕ್ಷೇತ್ರದ ಸಂಪರ್ಕಕ್ಕಾಗಿ ಈ ರಸ್ತೆ ಮುಖ್ಯವಾಗಿದೆ.

ಬೆಂಗಳೂರಿನಿಂದ ಹಾಸನದವರಗೆ ಚತುಷ್ಪಥ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ದ್ವಿಪಥ ರಸ್ತೆ ಇದ್ದರೂ, ಅತ್ಯಂತ ಕಿರಿದಾದದ್ದು ಹಾಗೂ ಹೆಚ್ಚು ತಿರುವು ಹೊಂದಿದೆ. ಹೀಗಾಗಿ ರಸ್ತೆ ವಿಸ್ತರಣೆ ಬೇಡಿಕೆ ಪದೇಪದೆ ಕೇಳಿ ಬರುತ್ತಿತ್ತು. ಹಾಸನದಿಂದ ಸಕಲೇಶಪುರದವರೆಗಿನ 45 ಕಿ.ಮೀ ಚತುಷ್ಪಥ ಕಾಮಗಾರಿಯಲ್ಲಿ 38 ಕಿ.ಮೀ ಪೂರ್ಣಗೊಂಡಿದೆ. ಇದಕ್ಕಾಗಿ 573 ಕೋಟಿ ರೂ. ವೆಚ್ಚ ಮಾಡಲಾಗಿದೆ.’ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಾರ್ಚ್‌ಗೆ ರ್ಚ್ಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಏಪ್ರಿಲ್‌ ಅಂತ್ಯಕ್ಕೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಗುತ್ತಿಗೆ ಅವಧಿ ಮೇ ತನಕ ಇದೆ’ ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button