ರಾಜಕೀಯ

ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ನಡೆದಿತ್ತು ಬಿಗ್ ಸ್ಕೆಚ್..!

ಬೆಂಗಳೂರು, ಡಿ.1- ತಮ್ಮ ವಿರುದ್ಧ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿ ಪರಾಭವಗೊಂಡಿದ್ದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷರಾಗಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸಿಎಂಗೆ ದೂರು ನೀಡಿದ್ದಾರೆ.

ಇಂದು ಬೆಳ್ಳಂ ಬೆಳಗ್ಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ವಿಶ್ವನಾಥ್ ತಮಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.  ಅಲ್ಲದೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಜತೆಯೂ ದೂರವಾಣಿ ಮೂಲಕ ಮಾತನಾಡಿರುವ ವಿಶ್ವನಾಥ್ ಗೋಪಾಲಕೃಷ್ಣ ಅವರಿಂದ ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಎಸ್.ಆರ್.ವಿಶ್ವನಾಥ್ ಅವರನ್ನು ಹತ್ಯೆಗೈಯಲು ಗೋಪಾಲಕೃಷ್ಣ ದೇವರಾಜ್ ಎಂಬುವರ ಜತೆ ನಡೆಸಿರುವ ಆಡಿಯೋ ಇದೀಗ ಬಹಿರಂಗಗೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ವಿಶ್ವನಾಥ್ ತಮಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಗೋಪಾಲಕೃಷ್ಣ ತಮ್ಮ ಮನೆಯಲ್ಲಿ ಕುಳಿತು ವಿಶ್ವನಾಥ್ ಅವರನ್ನು ಹತ್ಯೆಗೈಯಲು 5 ಕೋಟಿ ಸುಪಾರಿ ನೀಡುವುದಾಗಿ ಹೇಳಿರುವುದು ಸಂಭಾಷಣೆಯಲ್ಲಿ ಬಹಿರಂಗಗೊಂಡಿದೆ. ವಿಶ್ವನಾಥ್ ವಿರುದ್ಧ ನಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ನೂರು ಕೋಟಿ ಖರ್ಚು ಮಾಡಿದರೂ ಗೆಲ್ಲುವುದಕ್ಕೆ ಆಗುವುದಿಲ್ಲ. ಹಾಗಾಗಿ ಅವರನ್ನು ಮುಗಿಸಿದರೆ ನಾವು ರಾಜಕೀಯ ಪುನರ್ಜನ್ಮ ಪಡೆಯಬಹುದೆಂದು ಗೋಪಾಲಕೃಷ್ಣ , ದೇವರಾಜ್‍ಗೆ ಹೇಳಿರುವುದು ಸಂಭಾಷಣೆಯಲ್ಲಿ ಬಹಿರಂಗವಾಗಿದೆ.

ಆಂಧ್ರದಿಂದ ಶಾರ್ಟ್ ಶೂಟರ್‍ಗಳನ್ನು ಕರೆಸಬೇಕು. ಇದಕ್ಕಾಗಿ ನಾನು 5 ಕೋಟಿ ಕೊಡುತ್ತೇನೆ. ನಮ್ಮ ಸ್ಕೆಚ್ ಈ ಬಾರಿ ಮಿಸ್ ಆಗಬಾರದೆಂದು ಗೋಪಾಲಕೃಷ್ಣ ಹೇಳಿದ್ದಾರೆ. ಇವೆಲ್ಲವೂ ಆಡಿಯೋದಿಂದ ಬಹಿರಂಗಗೊಂಡಿರುವುದರಿಂದ ವಿಶ್ವನಾಥ್ ಭದ್ರತೆ ಒದಗಿಸುವಂತೆ ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.

ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು , ವಿಶ್ವನಾಥ್‍ಗೆ ಹೆಚ್ಚಿನ ಭದ್ರತೆ ಒದಗಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‍ಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button