ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸಲು ಐಸಿಎಂಆರ್ ಅಧ್ಯಯನ ಸಲಹೆ
ನವದೆಹಲಿ, ಸೆಪ್ಟೆಂಬರ್ 28: ದೇಶದ ಬಹುಪಾಲು ರಾಜ್ಯಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗಿದೆ. ಮೂರನೇ ಅಲೆ ಆತಂಕದ ನಡುವೆ ತಜ್ಞರ ಸಲಹೆ ಮೇರೆಗೆ ಕೊರೊನಾ ನಿಯಮಗಳ ಪಾಲನೆಯೊಂದಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.
ದಿನನಿತ್ಯವೂ ಮಕ್ಕಳ ದೈಹಿಕ ತಾಪಮಾನ ತಪಾಸಣೆ ನಡೆಸಿ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಸೋಂಕು ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ದಿನನಿತ್ಯವೂ ನಿರಂತರ ತಾಪಮಾನ ತಪಾಸಣೆ ನಡೆಸುವುದಕ್ಕಿಂತ ಮಕ್ಕಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಆಗಾಗ್ಗೆ ಕೊರೊನಾ ಪರೀಕ್ಷೆ ನಡೆಸುವುದು ಸೂಕ್ತ ಎಂದು ಅಧ್ಯಯನವೊಂದು ಸಲಹೆ ನೀಡಿದೆ.
ಐಸಿಎಂಆರ್‌ನ ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನಲ್ಲಿ ಪ್ರಕಟವಾದ ಅಧ್ಯಯನವು ಶಾಲೆಗಳಲ್ಲಿ ಪ್ರತಿದಿನವೂ ಮಕ್ಕಳಿಗೆ ತಾಪಮಾನ ತಪಾಸಣೆ ಅಗತ್ಯವಿಲ್ಲ ಎಂದು ಹೇಳಿದೆ.
ದಿನನಿತ್ಯ ತಾಪಮಾನ ತಪಾಸಣೆ ಪ್ರಯೋಜನಕ್ಕೆ ಬರುವುದಿಲ್ಲ. ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ಕೊರೊನಾ ಪರೀಕ್ಷಾ ತಂತ್ರಗಳನ್ನು ಅನುಸರಿಸುವುದು ಮುಖ್ಯವಾಗಿವೆ. ಇದು ಸೋಂಕು ಹರಡುವಿಕೆ ತಡೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
ಶಾಲೆಗಳಲ್ಲಿ ಕೊರೊನಾ ಸೋಂಕಿನ ಪರೀಕ್ಷಾ ತಂತ್ರಗಳನ್ನು ಪೂರಕವಾಗಿ ಅಳವಡಿಸಬೇಕು ಎಂದು ಐಸಿಎಂಆರ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಲರಾಂ ಭಾರ್ಗವ್, ಸಮೀರನ್ ಪಾಂಡಾ ಹಾಗೂ ತನು ಆನಂದ್ ವಿವರಣೆ ನೀಡಿದ್ದಾರೆ.
ಕೆನಡಾದ ಮಾದರಿಯನ್ನು ಎದುರಿಗಿಟ್ಟುಕೊಂಡು ಸೋಂಕಿನ ಹರಡುವಿಕೆ ತಡೆಯಲ್ಲಿ ಕೊರೊನಾ ಪರೀಕ್ಷೆ ಹಾಗೂ ಸೋಂಕಿನ ಲಕ್ಷಣಗಳ ಪರೀಕ್ಷೆಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ.