ವ್ಲಾದಿಮಿರ್ ಪುಟಿನ್ ಎಂಬ ಕೆಟ್ಟ ಮನುಷ್ಯ!ಮಾನವೀಯತೆಯ ಕಣ್ಣಲ್ಲಿ ಉಕ್ರೇನ್ ಯುದ್ಧ..
ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾಗಿ 25 ದಿನವೇ ಆಗಿದೆ. ಸುಲಭವಾಗಿ ಮುಗಿಸಬಹುದು ಎಂದುಕೊಂಡಿದ್ದ ಯುದ್ಧ ದಿನಕಳೆದಂತೆ ರಷ್ಯಾ ಪಾಲಿಗೆ ದುಬಾರಿಯಾಗುತ್ತಿದೆ. ನ್ಯಾಟೊ ಮತ್ತು ಐರೋಪ್ಯ ಒಕ್ಕೂಟ ನೆರವಿಗೆ ಬರಬಹುದು ಎಂದುಕೊಂಡಿದ್ದ ಉಕ್ರೇನ್ ನೇರ ಸೈನಿಕ ಸಹಾಯವಿಲ್ಲದೆ ಕಂಗಾಲಾಗಿದೆ. ಎರಡೂ ದೇಶಗಳು ಸೋಲದ ಹೊರತು ಯುದ್ಧ ಮುಗಿಯುವಂತಿಲ್ಲ. ಭದ್ರತೆಗೆ ಹತ್ತಾರು ಆತಂಕಗಳಿರುವ ಭಾರತದ ನೆಲೆಗಟ್ಟಿನಲ್ಲಿ ಯೋಚಿಸಿದರೆ ಈ ಯುದ್ಧ ಬೇಗ ಮುಗಿದಷ್ಟೂ ಒಳ್ಳೆಯದು. ಯುದ್ಧದ ಪರಿಸ್ಥಿತಿ ಮತ್ತು ಅದರಿಂದ ಉಂಟಾದ ಬಿಕ್ಕಟ್ಟು ಇದೇ ರೀತಿ ಮುಂದುವರಿದರೆ ಭಾರತ ತನ್ನ ನಿಲುವು ಸ್ಪಷ್ಟಪಡಿಸಲೇಬೇಕು ಎಂದು ಅಮೆರಿಕ, ನ್ಯಾಟೊ ದೇಶಗಳು ಒತ್ತಾಯಿಸಬಹುದು. ಅಷ್ಟೇ ಅಲ್ಲ, ಸಂಪನ್ಮೂಲ ಕೊರತೆಯಿಂದ ಕಂಗಾಲಾಗುವ ರಷ್ಯಾ ಸಹ ಭಾರತದ ನೆರವು ಯಾಚಿಸಬಹುದು. ಅಂಥ ಸಂದರ್ಭ ಬಂದೊದಗಿದರೆ ಭಾರತ ಯಾವ ನಿರ್ಧಾರ ತೆಗೆದುಕೊಂಡರೂ ದೀರ್ಘಾವಧಿಯಲ್ಲಿ ಬಾಧಿಸುವುದು ಖಂಡಿತ. ಭಾರತಕ್ಕೆ ಅಡಕತ್ತರಿಯಂಥ ಇಂಥ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದಾದರೆ ಈ ಯುದ್ಧ ಸಾಧ್ಯವಾದಷ್ಟೂ ಬೇಗ ಮುಗಿಯಬೇಕು.
ರಷ್ಯಾ-ಉಕ್ರೇನ್ ಯುದ್ಧವನ್ನು ಮೂರು ರೀತಿಯಲ್ಲಿ ಗ್ರಹಿಸುವ ಸಾಧ್ಯತೆಗಳು ಹೀಗಿವೆ. ನೀವು ಇಂದು ನೋಡುತ್ತಿರುವ ಮತ್ತು ಓದುತ್ತಿರುವ ಬಹುತೇಕ ವಿಶ್ಲೇಷಣೆಗಳು ಈ ಮೂರು ನೆಲೆಗಟ್ಟಿನ ಚೌಕಟ್ಟಿನಲ್ಲಿಯೇ ಇರುತ್ತವೆ.
ವ್ಲಾದಿಮಿರ್ ಪುಟಿನ್ ಎಂಬ ಕೆಟ್ಟ ಮನುಷ್ಯ
ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಕಾರಣನಾದ ಏಕೈಕ ಖಳನಾಯಕ (?) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಜಗತ್ತಿನ ಕಣ್ಣಲ್ಲಿ ವ್ಲಾದಿಮಿರ್ ಪುಟಿನ್ ಎಂದರೆ ಬೇರೆಯವರ ಮನೆಗೆ ನುಗ್ಗಿ ಅಮಾಯಕರನ್ನು ಹೊಡೆಯುವ ರೌಡಿಯ ಚಿತ್ರವೊಂದು ಕಣ್ಣಿಗೆ ಕಟ್ಟುತ್ತದೆ. ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಗ್ಗೆ ಜಗತ್ತಿಗೆ ಒಳ್ಳೆಯ ಅಭಿಪ್ರಾಯ ಮೂಡಿದೆ. ಜಗತ್ತಿನ ಕಣ್ಣಲ್ಲಿ ಝೆಲೆನ್ಸ್ಕಿ ಎಂದರೆ ತನ್ನ ಜೀವ ಪಣಕ್ಕಿಟ್ಟು ಊರಿನ ರಕ್ಷಣೆಗೆ ನಿಂತುಕೊಂಡ ದೇಶಭಕ್ತ. ಯುದ್ಧದಿಂದ ಪುಟಿನ್ ಜಯಪ್ರಿಯತೆಯು ವಿಶ್ವಮಟ್ಟದಲ್ಲಿ ಮಾತ್ರವಲ್ಲ ರಷ್ಯಾದಲ್ಲಿಯೂ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದೆ. ಕೊವಿಡ್ ಹೊಡೆತದ ನಂತರ ಆರ್ಥಿಕ ಹಿಂಜರಿತದಿಂದ ಕಂಗಾಲಾಗಿದ್ದ ರಷ್ಯಾಕ್ಕೆ ಇದೀಗ ಅಮೆರಿಕ ಮತ್ತು ಇತರ ದೇಶಗಳು ಹೇರಿರುವ ಆರ್ಥಿಕ ನಿರ್ಬಂಧಗಳ ಭಾರ ಹೊರುವುದು ಸುಲಭವಲ್ಲ. ಐರೋಪ್ಯ ಒಕ್ಕೂಟ, ನ್ಯಾಟೊ ಭಾಗವಾಗಲು ಹಾತೊರೆಯುವ ಉಕ್ರೇನ್ ನಾಗರಿಕರ ಮನಸ್ಥಿತಿ ಅಂದಾಜಿಸುವಲ್ಲಿ ಪುಟಿನ್ ಎಡವಿದ್ದು ಈಗಾಗಲೇ ಸ್ಪಷ್ಟವಾಗಿದೆ. ರಷ್ಯಾದಂಥ ದೈತ್ಯ ದೇಶದ ಪ್ರಬಲ ಸೇನೆಯ ವಿರುದ್ಧ ಉಕ್ರೇನ್ನಂತ ಪುಟ್ಟ ದೇಶದ ಸಾಮಾನ್ಯ ಸೇನೆ ಸತತ 25ನೇ ದಿನವೂ ಹೋರಾಟ ಮುಂದುವರಿಸಿರುವುದೇ ಇದಕ್ಕೆ ಉದಾಹರಣೆ.
ಇತಿಹಾಸದ ಪಾಠ ಮರೆತಿದ್ದಕ್ಕೆ ಶಿಕ್ಷೆ
ಜಗತ್ತಿನಲ್ಲಿ ಇರುವುದು ಎರಡೇ ಪ್ರಬಲ ಶಕ್ತಿಗಳು ಎಂದು 1904ರಲ್ಲಿಯೇ ಬ್ರಿಟನ್ನ ಭೂಗೋಳಶಾಸ್ತ್ರಜ್ಞ ಹಾಲ್ಫೋರ್ಡ್ ಮೆಕಿಂಡರ್ ಪ್ರತಿಪಾದಿಸಿದ್ದ. ಇದರಲ್ಲಿ ಒಂದು ಪೂರ್ವ ಯೂರೋಪ್ ಮತ್ತು ಏಷ್ಯಾದ ಭಾಗಗಳನ್ನು ಒಳಗೊಂಡ ರಷ್ಯಾ, ಮತ್ತೊಂದು ಅಮೆರಿಕ. ಭೂ ಯುದ್ಧದಲ್ಲಿ ರಷ್ಯಾ ಸದಾ ಪಾರಮ್ಯ ಮೆರೆಯುತ್ತದೆ. ಸಾಗರ ಸಮರಗಳಲ್ಲಿ ಅಮೆರಿಕದ ಮೇಲುಗೈ ಇರುತ್ತದೆ ಎನ್ನುವುದು ಹಾಲ್ಫೋರ್ಡ್ ಊಹೆಯಾಗಿತ್ತು. ಜಗತ್ತಿನಲ್ಲಿ ಶಾಂತಿ ಕಾಪಾಡಬೇಕೆಂದರೆ ಅಮೆರಿಕದ ಜೊತೆಗಿರುವ ಸ್ನೇಹಪರ ದೇಶಗಳನ್ನು ರಷ್ಯಾದೊಂದಿಗಿರುವ ಸ್ನೇಹಪರ ದೇಶಗಳಿಂದ ದೂರ ಇಡಬೇಕು. ಎರಡೂ ಶಕ್ತಿಗಳ ನಡುವೆ ಒಂದಿಷ್ಟು ತಟಸ್ಥ ದೇಶಗಳಿರಬೇಕು ಎನ್ನುವುದು ಹಾಲ್ಫೋರ್ಡ್ ನೀಡಿದ್ದ ಸಲಹೆ. ಇಂದಿನ ಉಕ್ರೇನ್-ರಷ್ಯಾದ ಹಿನ್ನೆಲೆಯನ್ನು ಗಮನಿಸಿದರೆ ಈ ಪಾಠವನ್ನು ಮನಗಾಣಲು ಅಮೆರಿಕ ಮತ್ತು ಯೂರೋಪ್ನ ಶಕ್ತಿಗಳು ವಿಫಲವಾಗಿದ್ದೇ ಕಾರಣ ಎನಿಸದಿರದು. ರಷ್ಯಾ ತನ್ನ ವಿರುದ್ಧವಾಗಿದೆ ಎಂದು ಭಾವಿಸುವ ಐರೋಪ್ಯ ಒಕ್ಕೂಟ ಮತ್ತು ನ್ಯಾಟೊ ಒಪ್ಪಂದಗಳನ್ನು ರಷ್ಯಾದ ನೆರೆ ದೇಶದವರೆಗೆ ತರಲು ಯತ್ನಿಸಿದ್ದಕ್ಕೆ ರಷ್ಯಾ ತೋರಿದ ಪ್ರತಿಕ್ರಿಯೆ ಈ ಯುದ್ಧ. ಮನೆ ಬಾಗಿಲಿಗೆ ಆತಂಕ ತಂದು, ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯ ಸ್ಥಿತಿಗೆ ರಷ್ಯಾವನ್ನು ದೂಡಲಾಯಿತು ಎನ್ನುವುದು ಈ ದೃಷ್ಟಿಕೋನದ ವಿಶ್ಲೇಷಣೆ. ಉಕ್ರೇನ್ ವಿರುದ್ಧ ನಿರ್ಣಾಯಕ ವಿಜಯ ಸಾಧಿಸದೇ ರಷ್ಯಾ ಹಿಂದೆ ಸರಿಯದು ಎನ್ನುವುದು ಈ ವಿಶ್ಲೇಷಣೆಯ ಮತ್ತೊಂದು ಪ್ರಮುಖ ಅಂಶ.
ಮಾನವೀಯತೆಯ ಕಣ್ಣಲ್ಲಿ ಉಕ್ರೇನ್ ಯುದ್ಧ
ಜಗತ್ತಿನ ಯಾವುದೇ ಭಾಗದಲ್ಲಿರುವ ಮನುಷ್ಯ ಮತ್ತೊಬ್ಬ ಮನುಷ್ಯನೊಂದಿಗೆ ಸಮಾನತೆ ಮತ್ತು ಸೋದರ ನೆಲೆಯಲ್ಲಿಯೇ ವರ್ತಿಸಬೇಕು ಎನ್ನುವ ಮಾನವಹಕ್ಕುಗಳ ಆಂದೋಲನ ಪ್ರತಿಪಾದಕರು ಈ ಯುದ್ಧವನ್ನು ಮತ್ತೊಂದು ಬಗೆಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಹೊಸಕಾಲದ ನಾಝಿಯಂತೆ ರಷ್ಯಾ ವರ್ತಿಸುತ್ತಿದೆ ಎನ್ನುವುದು ಇವರ ಆತಂಕ. ವ್ಯಕ್ತಿಗತ ಸ್ವಾತಂತ್ರ್ಯವನ್ನು ಖಾತ್ರಿಗೊಳಿಸಬೇಕಾದ್ದು ಸಾರ್ವಭೌಮ ದೇಶದ ಮುಖ್ಯ ಕರ್ತವ್ಯ. ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ಅಲ್ಲಿನ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಏಕರೂಪ ಸಮಾಜ ರೂಪಿಸುವ, ಕಮ್ಯುನಿಸಂ ತತ್ವಗಳನ್ನು ಹರಡುವ ರಷ್ಯಾದ ಪ್ರಯತ್ನ ನಿಲ್ಲಬೇಕು ಎನ್ನುವುದು ಯುದ್ಧವನ್ನು ಈ ದೃಷ್ಟಿಕೋನದಿಂದ ನೋಡುವವರು ಮಾಡುತ್ತಿರುವ ಒತ್ತಾಯ. ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಮಾತುಕತೆಯಲ್ಲಿ ಪರಿಹಾರವಿದೆ. ಹೀಗಿರುವ ಯುದ್ಧವೇಕೆ ಬೇಕು? ರಷ್ಯಾ ಸೇನೆ ಮೊದಲು ತನ್ನ ನೆಲೆಗಳಿಗೆ ಹಿಂದೆ ಸರಿಯಲಿ. ಅಮೆರಿಕ ಕಣ್ಮಾಯೆಯಿಂದ ಉಕ್ರೇನ್ನಲ್ಲಿ ಚಿತಾವಣೆ ಮಾಡುವುದು ನಿಲ್ಲಿಸಲಿ. ಯಾವುದೇ ಒತ್ತಡವಿಲ್ಲದ ಸ್ಥಿತಿಯಲ್ಲಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆದು ಶಾಂತಿ ನೆಲೆಸಲಿ ಎನ್ನುವುದು ಮಾನವೀಯತೆ ಪ್ರತಿಪಾದಿಸುವವರು ಒತ್ತಾಯವಾಗಿದೆ.