ವೀಕೆಂಡ್ ಕರ್ಫ್ಯೂ; ಪರಿಸ್ಥಿತಿ ಹೇಗಿದೆ?
ಬೆಂಗಳೂರು: ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ (Omicron) ಅಪಾಯವನ್ನು ತಡೆಯಲು ರಾಜ್ಯ ಸರ್ಕಾರ (State Government) ಮುಂದಾಗಿದ್ದು, ಕಠಿಣ ಕ್ರಮ ಜಾರಿಗೆ ತಂದಿದೆ. ಅದರಂತೆ ಐದೂವರೆ ತಿಂಗಳ ಬಳಿಕ ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ (Weekend curfew) ಜಾರಿಗೆ ತರಲಾಗಿದೆ. ಇಂದು ರಾತ್ರಿ 8 ರಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಸುಮಾರು 57 ಗಂಟೆಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಸೇವೆಗಳು ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಯಾವುದೇ ರೀತಿಯ ಸೇವೆಗಳು ವೀಕೆಂಡ್ ಕರ್ಫ್ಯೂನಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿನಾಯಿತಿ ಪಡೆದಿರುವ 10, 11, 12 ತರಗತಿಗಳು ಕೂಡ ಬಂದ್ ಆಗಲಿವೆ. ಕೇವಲ ಫುಡ್ ಡೆಲಿವರಿ ಬಾಯ್ಸ್, ಕೈಗಾರಿಕೆ, ಟಿಲಿಕಾಂ ಸೇರಿದಂತೆ ವಿನಾಯಿತಿ ಪಡೆದವರಿಗೆ ಮಾತ್ರ ಓಡಾಡುವುದಕ್ಕೆ ಅವಕಾಶವಿದೆ.
ಬೆಂಗಳೂರಿನಲ್ಲಿ ಕೋಚಿಂಗ್ ಸೆಂಟರ್‌ಗಳು ತೆರೆಯುವಂತಿಲ್ಲ
ರಾಜ್ಯದಲ್ಲಿ ಒಮಿಕ್ರಾನ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ. ರೆಡ್ ಜೋನ್ ಜಿಲ್ಲೆಯಾಗಿರುವ ಬೆಂಗಳೂರು ನಗರದಲ್ಲಿ 1 ರಿಂದ 9 ಹಾಗೂ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಭೌತಿಕ ತರಗತಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಹೀಗಾಗಿ ಎಲ್ಲ ಕೋಚಿಂಗ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ವಿಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ನಡೆಸದಿರಲು ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಲ್ಲದೇ ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ಈ ಬಗ್ಗೆ ಗಮನಹರಿಸಲು ಸೂಚನೆ ನೀಡಲಾಗಿದೆ.
ಸಾಮಾನ್ಯ ಜ್ವರ ಇದ್ರು ಆಸ್ಪತ್ರೆಗೆ ದೌಡಯಿಸುತ್ತಿರುವ ಜನರು
ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ ಕೇಸ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿ ಎದುರಾಗಿದೆ. ಎರಡನೇ ಅಲೆಯಲ್ಲಿ ಕೊರೊನಾದಿಂದ ಸಾಕಷ್ಟು ಜನರು ಸಾವನ್ನಪ್ಪಿದ್ದರು. ಇದೇ ಕಾರಣದಿಂದ ಮುಂಜಾಗ್ರತೆಯಿಂದ ಜನರು ಆಸ್ಪತ್ರೆಗೆ ಆಗಮಿಸಿ, ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ಶೇ 15 ರಿಂದ 20ರಷ್ಟು ಜನರು ಸಾಮಾನ್ಯ ಜ್ವರ, ಸಣ್ಣ ಪುಟ್ಟ ರೋಗ ಲಕ್ಷಣಗಳಿದ್ದರೂ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಜೊತೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಏರಿಕೆಯಾಗಿದೆ.
ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ?
– ಹಾಲಿನ ಬೂತ್ಗಳು
– ತರಕಾರಿ ಮತ್ತು ಹಣ್ಣಿನ ಮಂಡಿಗಳು
– ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಮೀನು ಮಾರುಕಟ್ಟೆಗಳು ತೆರೆದಿರುತ್ತದೆ.
– ಬೀದಿ ಬದಿ ವ್ಯಾಪಾರಿಗಳ ಕಾರ್ಯಚಟುವಟಿಕೆ ಎಂದಿನಂತಿರಲಿದೆ.
– ಆಸ್ಪತ್ರೆಗಳು, ನರ್ಸಿಂಗ್ ಹೋಂ, ಮೆಡಿಕಲ್ ಶಾಪ್, ನ್ಯಾಯಬೆಲೆ ಅಂಗಡಿಗಳು ಕಾರ್ಯಚಟುವಟಿಕೆ ನಡೆಸಲಿವೆ.
– ಎಲ್ಲ ಪದಾರ್ಥಗಳನ್ನು ಹೋಂ ಡೆಲಿವರಿ ಮಾಡಲು ಅನುವು.
– ಪೆಟ್ರೋಲ್ ಬಂಕ್‌ಗಳು, ಕೃಷಿ ಮಾರುಕಟ್ಟೆಗಳು ತೆರೆಯಲಿವೆ.
– ಹೋಟೆಲ್ ತೆರೆಯಲಿದ್ದು, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ.
– ಐಟಿ ಬಿಟಿ ಕಂಪನಿಗಳು, ಕೈಗಾರಿಕೆಗಳ ಕಾರ್ಯಚಟುವಟಿಕೆ ಯಥಾಸ್ಥಿತಿಯಲ್ಲಿರಲಿದೆ.
ವೀಕೆಂಡ್ ಕರ್ಫ್ಯೂಗೆ ಯಾವ ಸೇವೆಗಳಿಗೆ ಕಡಿವಾಣ?
– ಚಿತ್ರಮಂದಿರಗಳು, ಮಾಲ್‌ಗಳು ತೆರೆಯುವಂತಿಲ್ಲ.
– ವಾಹನ ಸರ್ವೀಸ್ ಸೆಂಟರ್‌ಗಳು ಕಾರ್ಯನಿರ್ವಹಿಸಲ್ಲ.
– ಈಜು ಕೊಳಗಳು, ಜಿಮ್ ತೆರೆಯುವಂತಿಲ್ಲ.
– ಪಬ್, ಕ್ಲಬ್, ಬಾರ್ ಅಂಡ್ ರೆಸ್ಟೋರೆಂಟ್, ಬಾರ್‌ಗಳು ತೆರೆಯಲ್ಲ.
– ಸಾರ್ವಜನಿಕ ಗ್ರಂಥಾಲಯಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್ ಶಾಪ್ ತೆರೆಯುವುದಿಲ್ಲ.
ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇಲ್ಲ
ಇಂದಿನಿಂದ ವೀಕೆಂಡ್ ಕರ್ಪ್ಯೂ ಹಿನ್ನಲೆ ರಾತ್ರಿ 8:30 ಕ್ಕೆ ದೇವಸ್ಥಾನಗಳು ಮುಚ್ಚಲಿವೆ. ಇಂದು ಶುಕ್ರವಾರ ಹಿನ್ನಲೆ ಹೆಚ್ಚಿನ ಭಕ್ತರು ದರ್ಶನಕ್ಕೆ ಬರುತ್ತಾರೆ. ಆದರೆ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನ ಮುಚ್ಚುತ್ತೇವೆ. ಇಂದು ರಾತ್ರಿ 8:30 ರಿಂದ ಸೋಮವಾರ ಬೆಳ್ಳಗ್ಗಿನ 5ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಎರಡು ದಿವಸ ಆರ್ಚಕರಿಂದ ಎಂದಿನಂತೆ ಪೂಜಾ ಸೇವೆಗಳನ್ನು ಮಾಡಲಾಗುತ್ತದೆ. ಆದರೆ ಭಕ್ತರಿಗೆ ಮಾತ್ರ ಅವಕಾಶ ಇರಲ್ಲ ಎಂದು ಮಲ್ಲೇಶ್ವರಂ ಗಂಗಮ್ಮ ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
ವೀಕೆಂಡ್ ಕರ್ಫೂನಲ್ಲೂ ನಮ್ಮ ಮೆಟ್ರೋ ಓಡಾಟ ಇರಲಿದೆ
ವೀಕೆಂಡ್ ಕರ್ಫ್ಯೂನಲ್ಲಿಯೂ ಮೆಟ್ರೋ ಸಂಚಾರ ಇರಲಿದೆ. ಆದರೆ 20 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಸಂಚಾರ ಇರಲಿದೆ. ಅಲ್ಲದೇ ವೀಕೆಂಡ್ ಕರ್ಪ್ಯೂ ಜಾರಿ ಹಿನ್ನಲೆ, ಮೆಟ್ರೋ ಸಂಚಾರಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ವೀಕೆಂಡ್ ಹಾಗೂ ನೈಟ್ ಕಫ್ರ್ಯೂ ವೇಳೆ ಮೆಟ್ರೋ ಸಂಚಾರದ ಸಮಯದಲ್ಲಿ ಬದಲಾವಣೆಯಾಗಲಿದೆ. ಇಂದು ರಾತ್ರಿ 10 ಗಂಟೆಗೆ ಕೊನೆಯ ಮೆಟ್ರೋ ಟ್ರೈನ್ ಸಂಚಾರ ಮಾಡಲಿದೆ. ಸೋಮವಾರದಿಂದ ಗುರುವಾರದವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ.
ನಾಳೆಯಿಂದ 2 ದಿನ ಹಂಪಿ ಬಂದ್
ಕರ್ನಾಟಕ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿರುವುದರಿಂದ ರಾಜ್ಯದಲ್ಲಿ ಬೆಂಗಳೂರು, ಧಾರವಾಡ ಮತ್ತು ಹಂಪಿ ವಲಯದಲ್ಲಿ ಬರುವ ಭಾರತೀಯ ಪುರಾತತ್ತ್ವ ಶಾಸ್ತ್ರ ಇಲಾಖೆಯಡಿ ಬರುವ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಲಾಗಿದೆ ಎಂದು ಭಾರತೀಯ ಪುರಾತತ್ತ್ವ ಶಾಸ್ತ್ರ ಇಲಾಖೆ (Archaeological Survey of India-ASI) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
ವೀಕೆಂಡ್ ಕರ್ಫ್ಯೂನಲ್ಲಿ ಪರೀಕ್ಷೆ ಬರೆಯುವುದಕ್ಕೆ ಯಾವುದೇ ಅಡ್ಡಿಯಿಲ್ಲ
ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಹಾಲ್ ಟಿಕೆಟ್ ತೋರಿಸಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವೀಕೆಂಡ್ ಕರ್ಫ್ಯೂನಲ್ಲಿ ಪರೀಕ್ಷೆ ಬರೆಯುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಪರೀಕ್ಷಾರ್ಥಿಗಳು ಪ್ರವೇಶ ಪ್ರತಿ ತೋರಿಸಿ ಓಡಾಡಬಹುದು. ಆ ಮೂಲಕ ಪರೀಕ್ಷಾ ಕೊಠಡಿಗೆ ತೆರಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸರ್ಕಾರದಿಂದ ಅನುಮತಿ ದೊರೆತಿದೆ.