‘ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ ಅಗತ್ಯ’: ಜಿ-4 ರಾಷ್ಟ್ರಗಳ ಪ್ರತಿಪಾದನೆ
ನ್ಯೂಯಾರ್ಕ್ (ಪಿಟಿಐ): ‘ಶಾಶ್ವತ ಹಾಗೂ ಶಾಶ್ವತವಲ್ಲದ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಚನೆಯಲ್ಲಿ ಸುಧಾರಣೆ ತರುವುದು ಅಗತ್ಯ’ ಎಂದು ಜಿ-4 ರಾಷ್ಟ್ರಗಳು ಪ್ರತಿಪಾದಿಸಿವೆ.
‘ಜಾಗತಿಕ ಶಾಂತಿ ಹಾಗೂ ಸುರಕ್ಷತೆ ಬಹಳ ಸಂಕೀರ್ಣವಾದ ವಿಷಯವಾಗಿದೆ. ಇದಕ್ಕೆ ಹೊಸ ಸವಾಲುಗಳೂ ಎದುರಾಗುತ್ತಿವೆ. ಇಂಥ ವಿಷಯಗಳನ್ನು ವಿಶ್ವಸಂಸ್ಥೆ ಸಮರ್ಥವಾಗಿ ಎದುರಿಸಬೇಕು ಎಂದಾದರೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಅಗತ್ಯ’ ಎಂದು ಈ ರಾಷ್ಟ್ರಗಳು ಹೇಳಿವೆ.
ಭಾರತ, ಬ್ರೆಜಿಲ್, ಜರ್ಮನಿ ಹಾಗೂ ಜಪಾನ್, ಜಿ-4 ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ. ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ಅಧಿವೇಶನದ ಹಿನ್ನೆಲೆಯಲ್ಲಿ ವರ್ಚುವಲ್ ವಿಧಾನದ ಮೂಲಕ ಆಯೋಜಿಸಿದ್ದ ಸಂಘಟನೆಯ ಸಭೆಯಲ್ಲಿ, ಈ ರಾಷ್ಟ್ರಗಳ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್, ಕಾರ್ಲೋಸ್ ಅಲ್ಬರ್ಟೊ ಫ್ರಾಂಕೊ ಫ್ರಾಂಕಾ, ಹೈಕೊ ಮಾಸ್ ಹಾಗೂ ಮೊಟೆಗಿ ತೊಷಿಮಿತ್ಸು ಅವರು ಪಾಲ್ಗೊಂಡಿದ್ದರು.
‘ಭದ್ರತಾ ಮಂಡಳಿಯು ಹೆಚ್ಚು ನ್ಯಾಯಸಮ್ಮತವಾಗಿ, ಪರಿಣಾಮಕಾರಿ ಹಾಗೂ ಪ್ರಾತಿನಿಧಿಕವಾಗಿ ಕಾರ್ಯನಿರ್ವಹಿಸಬೇಕು. ಅದು ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವಂತಾಗಬೇಕು’ ಎಂದು ಅವರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.