ವಿದ್ಯಾರ್ಥಿನಿಯರಿಗೆ ‘ಓಬವ್ವ ಸ್ವಯಂ ರಕ್ಷಣಾ ಕಲೆ’ ತರಬೇತಿ!
ಬೆಂಗಳೂರು: “ಮಹಿಳೆಯರು ಅಬಲೆಯಲ್ಲ, ಸಬಲೆ” ಅಂತ ಇತಿಹಾಸಗಳು ಸಾರಿ ಸಾರಿ ಹೇಳಿವೆ. ಆದ್ರೆ ಮಹಿಳೆ ಅಂದರೆ ಕೈಯಲ್ಲಿ ಆಗದವಳು ಎನ್ನುವಂತ ಕೆಟ್ಟ ಪದ್ಧತಿ ಈಗಲೂ ಹೆಚ್ಚಿನ ಕಡೆಗಳಲ್ಲಿ ಇವೆ. ಮಹಿಳೆಯರು, ಬಾಲಕಿಯರು, ವೃದ್ಧೆಯರ ಮೇಲೆ ದಿನನಿತ್ಯ ದೈಹಿಕ ಹಿಂಸೆ , ಲೈಂಗಿಕ ದೌರ್ಜನ್ಯ , ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಇವುಗಳಿಂದ ಮಹಿಳೆಯರು ಅದರಲ್ಲೂ ಈಗಷ್ಟೇ ಜಗತ್ತು ನೋಡುತ್ತಿರುವ ಪುಟ್ಟ ಬಾಲಕಿಯರು ಕಂಗೆಟ್ಟು ಹೋಗ್ತಾರೆ. ಭಯದಲ್ಲೇ ಬದುಕುತ್ತಾರೆ. ಆದರೆ ಇನ್ಮುಂದೆ ಬಾಲಕಿಯರು ಭಯಪಡಬೇಕಾದ ಅಗತ್ಯವೇ ಇಲ್ಲ. ದುಷ್ಟರಿಗೆ , ಕಾಮುಕರಿಗೆ ಹೆದರಿ ಕೂರಲೇ ಬೇಕಿಲ್ಲ. ಯಾಕೆಂದರೆ ಅವರಿಗೆ ಇನ್ನು ಸ್ವಯಂ ರಕ್ಷಣೆಯ ಪಾಠ ಹೇಳಿ ಕೊಡಲಾಗುತ್ತದೆ. ಇನ್ಮುಂದೆ ಪ್ರತಿ ಮನೆಯ ಹೆಣ್ಣು ಮಗಳೂ ಒನಕೆ ಓಬವ್ವಳಂತೆ ಧೈರ್ಯಶಾಲಿ ಆಗಲಿದ್ದಾಳೆ. ಇಂಥದ್ದೊಂದು ಸ್ವಯಂ ರಕ್ಷಣೆಯ ಪಾಠ ಹೇಳಿ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.
ಸರ್ಕಾರದಿಂದ ‘ಓಬವ್ವ ಸ್ವಯಂ ರಕ್ಷಣಾ ಕಲೆ’ ತರಬೇತಿ
ಮಹಿಳೆಯರು, ಬಾಲಕಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು, ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸರ್ಕಾರ ಬಾಲಕಿಯರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದುವೇ ‘ಓಬವ್ವ ಆರ್ಟ್ ಆಫ್ ಸೆಲ್ಫ್ ಡಿಫೆನ್ಸ್ ಟ್ರೇನಿಂಗ್’ ಅಥವಾ ‘ಓಬವ್ವ ಸ್ವಯಂ ರಕ್ಷಣಾ ಕಲೆ’ ತರಬೇತಿ. ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಸುಮಾರು 50 ಸಾವಿರ ವಿದ್ಯಾರ್ಥಿನಿಯರಿಗೆ ಈ ಯೋಜನೆಯಡಿ ಸ್ವಯಂ ರಕ್ಷಣೆಯ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ನೀಡಲು ಪೊಲೀಸ್ ತರಬೇತಿ ಶಾಲೆಗಳನ್ನು ಬಳಸಿಕೊಳ್ಳಲು ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಟ್ರೇನಿಂಗ್
ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ 50 ಸಾವಿರ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ತರಬೇತಿ ನೀಡಲು ನಿರ್ಧಾರ ಮಾಡಲಾಗಿದೆ. ಒನಕೆ ಓಬವ್ವನ ಹೆಸರೇ ವಿದ್ಯಾರ್ಥಿಗಳಿಗೆ ಬಲ ತುಂಬುತ್ತದೆ ಅಂತ ಸಿಎಂ ಹೇಳಿದ್ರು.
ಶಾಲೆಗಳಲ್ಲೂ ಸುರಕ್ಷತಾ ಕಾರ್ಯಕ್ರಮಕ್ಕೆ ಒತ್ತು
ಪ್ರತಿ ಕೆಡೆಟ್ಗೆ 1200 ರೂ.ಗಳ ಹಂಚಿಕೆಯೊಂದಿಗೆ ವಾರ್ಷಿಕ 7,500 ಎನ್ಸಿಸಿ ಕೆಡೆಟ್ಗಳನ್ನು ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಇನ್ನೂ 75 ಎನ್ಸಿಸಿ ಘಟಕಗಳನ್ನು ಆರಂಭಿಸಲಾಗುವುದು. 2023ರ ವೇಳೆಗೆ ರಾಜ್ಯದಲ್ಲಿ ಎನ್ಸಿಸಿ ಕೆಡೆಟ್ ಸಂಖ್ಯೆಯನ್ನು 50,000ಕ್ಕೆ ಹೆಚ್ಚಿಸಲಾಗುವುದು. ಮಹಿಳೆಯರಿಗೆ ಸೈನಿಕ ತರಬೇತಿಗೆ ಸಮಾನವಾಗಿ ಆತ್ಮರಕ್ಷಣೆ ತರಬೇತಿ ನೀಡಲು ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಏನಿದು ಓಬವ್ವ ಸ್ವಯಂ ರಕ್ಷಣಾ ಕಲೆ?
ಚಿತ್ರದುರ್ಗದ ಕೋಟೆಯ ಕಾವಲಿಗೆ ಕಾರಣಳಾಗಿ, ಹೈದರಾಲಿ ಸೈನ್ಯವನ್ನು ಎದುರಿಸಿದ ವೀರ ಮಹಿಳೆ ಒನಕೆ ಓಬವ್ವ. ಕೇವಲ ಒಂದು ಒನಕೆ ಹಿಡಿದು, ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದವಳು. ಕೊನೆಗೆ ಶತ್ರುಗಳ ಸಂಚಿಗೆ ಬಲಿಯಾದವಳು. ಆಕೆಯ ಹೆಸರಿನಲ್ಲಿ ಈ ಸ್ವಯಂ ರಕ್ಷಣಾ ತರಬೇತಿ ನಡೆಯಲಿದೆ.
ಮುಖ್ಯವಾಗಿ ಕರಾಟೆ ಹಾಗೂ ಇನ್ನಿತರ ಸ್ವಯಂ ರಕ್ಷಣಾ ತಂತ್ರಗಳನ್ನು ಇದರಲ್ಲಿ ಹೇಳಿ ಕೊಡಲಾಗುತ್ತದೆ. ಜೊತೆಗೆ ದೈಹಿಕ ವ್ಯಾಯಾಮದಂತದ ಕಸರತ್ತುಗಳೂ ಇರುತ್ತವೆ. ವಿವಿಧ ರೀತಿಯ ದೌರ್ಜನ್ಯಗಳಿಂದ ಬಾಲಕಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಳು ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.