ಕೊಡಗು(ಅ.16): ಕೋವಿಡ್(COVID-19) ಹಿನ್ನಲೆಯಲ್ಲಿ ಸಾಕಷ್ಟು ನಿರ್ಬಂಧಗಳ ಹಾಕಿ ಸರಳ ರೀತಿಯಾಗಿ ಆಚರಣೆಗೆ ಅವಕಾಶ ನೀಡಿದ್ದ ಮಡಿಕೇರಿ ದಸರಾ(Madikeri Dasara) ಸಾವಿರಾರು ಪ್ರವಾಸಿಗರೊಂದಿಗೆ ಅದ್ಧೂರಿಯಾಗಿಯೇ ನಡೆದಿದೆ. ಶುಕ್ರವಾರ ರಾತ್ರಿಯಿಡೀ ನಡೆದ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆ(Shobhayatre) ಜನರ ಮನಸೂರೆಗೊಂಡಿತು.
ಡಿಜೆ ಸೌಂಡ್ ಜೊತೆಗೆ ಬಣ್ಣದ ಓಕುಳಿ, ವಿವಿಧ ಪೌರಾಣಿಕ ಕಥೆಗಳು, ರಾಕ್ಷಸರ ನರ್ತನಗಳು ಜನರನ್ನು ಆ ಕ್ಷಣಕ್ಕೆ ದೇವಲೋಕಕ್ಕೆ ಕರೆದೊಯ್ದಿದ್ದವು ಎಂದರೆ ತಪ್ಪಲ್ಲ. ದುಷ್ಟರ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪಗಳ ಶೋಭಾಯಾತ್ರೆ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ, ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರದರ್ಶನಗೊಂಡ ಆಂಜನೇಯ ದರ್ಶನ, ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಗಣಪತಿಯಿಂದ ಗಜಾಸುರನವಧೆ, ಚಂಡ ಮುಂಡರ ವಧೆ ಸೇರಿದಂತೆ ಹಲವು ಪೌರಾಣಿಕ ಕಥಾವಸ್ತುವನ್ನು ಆಧರಿಸಿದ ನೃತ್ಯ ಪ್ರದರ್ಶನಗಳನ್ನು, ಯುದ್ಧದ ದೃಶ್ಯಗಳನ್ನು ಮಂಟಪಗಳು ಸಾದರಪಡಿಸಿದವು. ಶುಕ್ರವಾರ ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಶೋಭಾಯಾತ್ರೆ ಬೆಳಿಗ್ಗೆ 5 ಗಂಟೆವರೆಗೂ ನಡೆಯಿತು.