ರಾಜ್ಯ
Trending

ವಾಸಯೋಗ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ ವಿದ್ಯುತ್ ಸ್ಮಾರ್ಟ್ ಮೀಟರ್

ನೂರಾರು ಕನಸು ಹೊತ್ತು ಜನ ತಮ್ಮ ಕನಸಿನ ಮನೆ ಕಟ್ಟಿದ್ದಾರೆ. ಲಕ್ಷ ಲಕ್ಷ ಬಂಡವಾಳ ವ್ಯಯ ಮಾಡಿ ಸೂರು ನಿರ್ಮಿಸಿಕೊಂಡಿದ್ದಾರೆ. ಆದರೆ ಮನೆ‌ ಪೂರ್ಣಗೊಂಡ ಮೇಲೆ ಮನೆಗೆ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಸಲು ಹೋದ ಮಾಲೀಕರಿಗೆ ಆಘಾತವಾಗಿದೆ.

ಹೌದು.. ಇದಕ್ಕೆ ಕಾರಣ ಬೆಸ್ಕಾಂ ವಾಸ ಯೋಗ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ ಸ್ಮಾರ್ಟ್ ವಿದ್ಯುತ್ ಮೀಟರ್ ಕೊಡಲು ನಿರ್ಧಾರ ಮಾಡಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಿರುವ ಅದೆಷ್ಟೋ ಮನೆ ಮಾಲೀಕರಿಗೆ ಸ್ಮಾರ್ಟ್ ಮೀಟರ್​ ದಕ್ಕಿಲ್ಲ. ಇಂದಿಗೂ ಅವರೆಲ್ಲ ಮೀಟರ್​ಗಾಗಿ ಕಾದು ಕುಳಿತಿದ್ದಾರೆ.

ಮೀಟರ್ ಪಡೆಯಲು ಬೆಸ್ಕಾಂ ಕಚೇರಿಗೆ ತೆರಳಿದರೆ ವಾಸ ಯೋಗ್ಯ ಪ್ರಮಾಣ ಪತ್ರ ಕೇಳುತ್ತಿದ್ದಾರೆ. ಈ ಒಸಿ ಪ್ರಮಾಣ ಪತ್ರ ಪಡೆಯಲು ಮಹಾನಗರ ಪಾಲಿಕೆಗೆ ತೆರಳಿದರೆ ಅಲ್ಲಿ ಚಿಕ್ಕಪುಟ್ಟ ನಿವೇಶನಗಳಿಗೆ, ಮನೆಗಳಿಗೆ ವಾಸ ಯೋಗ್ಯ ಪ್ರಮಾಣ ಪತ್ರ ಕೊಡಲಾಗುವುದಿಲ್ಲ ಎಂದು ಹೇಳುತ್ತಿದ್ದು, ಮಧ್ಯಮ ವರ್ಗದ ಜನರನ್ನು ಕಂಗೆಡಿಸಿದೆ.

ಚಿಕ್ಕಪುಟ್ಟ ಮನೆಗಳಿಗೆ ಸಿಗುತ್ತಿಲ್ಲ ವಿದ್ಯುತ್: ಅಧಿಕೃತ ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಮೀಟರ್​​ ಸಿಗುತ್ತಿಲ್ಲ. 30×40, 40×60, 50×60 ಅಳತೆಯ ಇನ್ನಿತರ ದೊಡ್ಡ ದೊಡ್ಡ ಅಳತೆಯ ನಿವೇಶನಗಳಲ್ಲಿ ಕಟ್ಟಿರುವ ಅಧಿಕೃತ ನಿವಾಸಗಳಿಗೆ ವಾಸ ಯೋಗ್ಯ ಪ್ರಮಾಣ ಪತ್ರ ದಕ್ಕುತ್ತಿದೆ. ಜೊತೆಗೆ ಸ್ಮಾರ್ಟ್ ಮೀಟರ್ ಕೂಡ ಸಿಗುತ್ತಿದೆ. ಆದರೆ, ಅಧಿಕೃತವಾಗಿರುವ 10×30, 15×30, 20×30, 20×20 ಅಳತೆಯ ಮಧ್ಯಮ ವರ್ಗದ ಜನರ ಪುಟ್ಟ ಪುಟ್ಟ ಡೋರ್ ನಂಬರ್ ನಿವೇಶನಗಳಿಗೆ ವಾಸ ಯೋಗ್ಯ ಪ್ರಮಾಣ ಪತ್ರ ಸಿಗುತ್ತಿಲ್ಲ. ಹೀಗಾಗಿ ಮಧ್ಯಮ ವರ್ಗದ ಜನತೆಯ ಮನೆಗೆ ಮೀಟರ್ ಸಿಗುತ್ತಿಲ್ಲ.

ಬೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್​ ಪಾಟೀಲ್ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, “ವಾಸ ಯೋಗ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ ನಾವು ಸ್ಮಾರ್ಟ್ ಮೀಟರ್ ಕೊಡುತ್ತಿದ್ದೇವೆ. 2025 ಫೆಬ್ರವರಿಯಿಂದ ಇಲ್ಲಿ ತನಕ ಒಟ್ಟು 763 ಸ್ಮಾರ್ಟ್ ಮೀಟರ್​ಗಳನ್ನು ನೀಡಲಾಗಿದೆ. ಅರ್ಜಿ ಯಾರು ಕೊಡುತ್ತಿಲ್ಲ. ಒಸಿ ಬೇಕಾಗಿದ್ದರಿಂದ ಯಾರು ಮೀಟರ್​ ಪಡೆಯಲು ಬರುತ್ತಿಲ್ಲ. ಕಾರಣ ಲೈಸೆನ್ಸ್​ ಸಿಗುತ್ತಿಲ್ಲ. ಅದಕ್ಕೆ ಯಾರು ಬರುತ್ತಿಲ್ಲ” ಎಂದರು.

ಫೆ – ಆಗಸ್ಟ್ ತಿಂಗಳ ತನಕ ಎಷ್ಟು ಮೀಟರ್ ಕೊಡಲಾಗಿದೆ?: “ಅಧಿಕೃತವಾಗಿ ನಿರ್ಮಿಸಿರುವ ದೊಡ್ಡ ಅಳತೆಯ ಹೊಸ ಕಟ್ಟಡಗಳಿಗೆ ಸ್ಮಾರ್ಟ್ ಮೀಟರ್ ಕೊಡಲಾಗುತ್ತಿದೆ. ಇಲ್ಲಿ ಹಳೇ ಮೀಟರ್​ಗಳಿಗೆ ಅವಕಾಶ ಇಲ್ಲ. ಹಳೇ ಮೀಟರ್ ಅಳವಡಿಸಿಕೊಂಡಿರುವ ಹಳೇ ಮನೆಗಳಿಗೆ ಹಳೇ ಮೀಟರ್ ಬದಲಾಯಿಸಿ ಸ್ಮಾರ್ಟ್ ಮೀಟರ್ ಕೊಡಲಾಗುತ್ತಿದೆ. ಸಿಂಗಲ್ ಫೇಸ್‌ ಒಂದು ಸ್ಮಾರ್ಟ್ ಮೀಟರ್ 4889 -5000 ರೂಪಾಯಿ, ತ್ರೀ ಫೇಸ್ ಕನೆಕ್ಷನ್​ಗೆ ಸ್ಮಾರ್ಟ್ ಮೀಟರ್ ದರ 8,800 ರೂಪಾಯಿಗಳಾಗಿರುತ್ತವೆ. ಇದನ್ನು ಕಟ್ಟಿ ಮೀಟರ್ ಪಡೆಯಬೇಕಾಗುತ್ತದೆ. ಮೀಟರ್ ಬೇಕಾದರೆ ಗ್ರಾಹಕರು ಬೆಸ್ಕಾಂ ಕಚೇರಿಯಲ್ಲಿ ಮೊದಲು 50 ರೂಪಾಯಿ ರಿಜಿಸ್ಟರ್ ಫೀಸ್ ಕೊಡುವ ಮೂಲಕ ಕಂಪ್ಯೂಟರ್​ನಿಂದ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಬೆಸ್ಕಾಂ ಸೆಕ್ಷನ್ ಆಫೀಸರ್ ಪರಿಶೀಲನೆ ನಡೆಸಿದ ಬಳಿಕ ವಾಸ ಯೋಗ್ಯ ಪತ್ರ ಕೊಟ್ಟು, 5 ಸಾವಿರ ಹಣ ಭರಿಸಿದರೆ ಅಧಿಕಾರಿಗಳು ಮೀಟರ್ ಕೊಡುತ್ತಾರೆ. ದಾವಣಗೆರೆ ಜಿಲ್ಲೆಯ ನಗರ ಗ್ರಾಮೀಣ ಭಾಗದಲ್ಲಿ ಒಟ್ಟು 763 ಮೀಟರ್‌ಗಳನ್ನು ಬೆಸ್ಕಾಂನಿಂದ ವಿತರಿಸಲಾಗಿದೆ. ಈ ವರ್ಷ ಫೆಬ್ರವರಿಯಿಂದ ಆಗಸ್ಟ್ ಕೊನೆ ತನಕ ಒಸಿ ಪ್ರಮಾಣ ಪತ್ರ ನೀಡಿದವರಿಗೆ ಮಾತ್ರ 763 ಮೀಟರ್​ ನೀಡಲಾಗುತ್ತದೆ” ಎಂದು ಎಇಇ ಚಂದ್ರನಾಯ್ಕ್ ತಿಳಿಸಿದ್ದಾರೆ.

ಪೋಸ್ಟ್ ಪೇಡ್, ಪ್ರೀಪೇಡ್, ತಾತ್ಕಾಲಿಕ ಮೀಟರ್ ವಿತರಣೆ: “ಮನೆಗಳಿಗೆ ಪೋಸ್ಟ್ ಪೇಡ್, ಪ್ರೀಪೇಡ್ ತಾತ್ಕಾಲಿಕ ಸ್ಮಾರ್ಟ್ ಮೀಟರ್​​ಗಳನ್ನು ನೀಡಲಾಗುತ್ತಿದೆ. ಮೊದಲಿಗೆ ಗ್ರಾಹಕರು ಮೀಟರ್​ ಪಡೆಯಲು ಹಣ ಡೆಪಾಸಿಟ್​ ಮಾಡಬೇಕಾಗುತ್ತದೆ. ಅವರು ನೀಡಿದ ಹಣ ಸ್ಮಾರ್ಟ್​ ಮೀಟರ್​​​ ಅಲ್ಲೇ ಭರಿಸಲಾಗಿರುತ್ತದೆ. ಆ ಹಣ ಮೀಟರ್ ಅಳವಡಿಸಿದ ಬಳಿಕ ಒಂದು ತಿಂಗಳು ರನ್ ಆಗಲಿದೆ. ಹಣ ಖಾಲಿ ಆಗಿದ್ದರು ಹಣ ಭರಿಸಲು ಒಂದು ತಿಂಗಳು ಸಮಯ ಅವಕಾಶ ಇರುತ್ತದೆ. ಹಣ ಭರಿಸಲಿಲ್ಲ ಎಂದರೆ ವಿದ್ಯುತ್ ಸಂಪರ್ಕ ಕಡಿತ ಆಗಲಿದೆ. ಮೀಟರ್​ ಯಾವ ರೀತಿ ಕೆಲಸ ಮಾಡಲಿದೆ ಎಂದರೆ ಮೊಬೈಲ್​ಗೆ ಯಾವ ರೀತಿ ಹಣ ಭರಿಸಿದರೆ ಕೆಲಸ ಮಾಡಲಿದೆ. ಅದೇ ರೀತಿ ಕೆಲಸ ಮಾಡಲಿದೆ. ದಾವಣಗೆರೆ ನಗರದಲ್ಲಿ ಇಲ್ಲಿ ತನಕ 450ಕ್ಕೂ ಹೆಚ್ಚು ಮೀಟರ್​ಗಳನ್ನು ನೀಡಲಾಗಿದೆ” ಎಂದು ಎಇಇ ಚಂದ್ರನಾಯ್ಕ್ ಅವರು ಮಾಹಿತಿ ನೀಡಿದರು.

ದಾವಣಗೆರೆ ನಗರ – ಗ್ರಾಮೀಣ ಭಾಗದಲ್ಲಿ ಕೊಟ್ಟಿರುವ ಮೀಟರ್​ ಮಾಹಿತಿ: ದಾವಣಗೆರೆ ಜಿಲ್ಲೆಯಲ್ಲಿ 2025ರಲ್ಲಿ ಎಂಟು ತಿಂಗಳಲ್ಲಿ ಒಟ್ಟು 763 ಸ್ಮಾರ್ಟ್ ಮೀಟರ್​ಗಳನ್ನು ವಿತರಣೆ ಮಾಡಲಾಗಿದೆ. ಪ್ರಮುಖವಾಗಿ ದಾವಣಗೆರೆ ನಗರದ 2024ರ ಅಂಕಿ – ಅಂಶಗಳನ್ನು ನೋಡುವುದಾದರೆ ಎಲ್​ಟಿ1 ಎಂದರೇ ನೂತನ ಮನೆಗಳಿಗೆ 2,464 ಮೀಟರ್​. ಎಲ್​ಟಿ3 ಎಂದರೆ ಕಮರ್ಷಿಯಲ್​ಗೆ ನೀಡಿರುವುದು 648 ಮೀಟರ್​. ಎಲ್​ಟಿ 5 ಎಂದರೆ ಇಂಡಸ್ಟ್ರಿಯಲ್​ಗೆ ನೀಡಿರುವ ಮೀಟರ್ ಸಂಖ್ಯೆ 63, ಇನ್ನು ಎಲ್​ಟಿ 6 ಎಂದರೆ ನೀರು ಸರಬರಾಜುಗೆ-108 ಮೀಟರ್, ಎಲ್​ಟಿ 7 ಎಂದರೆ ಕಮರ್ಷಿಯಲ್ ಟಿಪಿ ಒಟ್ಟು 748. ಹೆಚ್​ಟಿ ಎಂದರೇ ದೊಡ್ಡ ಕೈಗಾರಿಕೆಗಳಿಗೆ 7 ಮೀಟರ್ ಕೊಡಲಾಗಿತ್ತು.‌ ಇದೀಗ 2025ರ ಅಂಕಿ ಅಂಶಗಳನ್ನು ನೋಡುವುದಾದರೆ ಎಲ್​ಟಿ 1-16, ಎಲ್​ಡಿ3-08, ಎಲ್​ಟಿ5- 02, ಎಲ್​ಟಿ 07-169 ಸೇರಿದಂತೆ ಒಟ್ಟು 197 ಮೀಟರ್​ ಗಳನ್ನು ಈ ಬಾರಿ ನೀಡಲಾಗಿದೆ. ಇಡೀ ಜಿಲ್ಲೆಯಲ್ಲಿ 763 ಸ್ಮಾಟ್​​ ಮೀಟರ್​ಗಳನ್ನು ವಿತರಣೆ ಮಾಡಿದ್ದೇವೆ ಎಂದು ಬೆಸ್ಕಾಂ ಕಚೇರಿಯಿಂದ ಮಾಹಿತಿ ಬಂದಿದೆ.

ಎಇಇ ಚಂದ್ರನಾಯ್ಕ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ರೆವಿನ್ಯೂ ಲ್ಯಾಂಡ್​ ಅಲ್ಲಿ ಮನೆ ಕಟ್ಟಿಕೊಂಡವರಿಗೆ ಸೇರಿದಂತೆ ಅಧಿಕೃತವಾಗಿ ಕಟ್ಟಿಕೊಂಡಿರುವ ಮನೆಗಳಿಗೆ ಮೀಟರ್ ಕೊಡಲಾಗುತ್ತಿಲ್ಲ. ಈಗಾಗಲೇ ನಾಲ್ಕೈದು ತಿಂಗಳಿಂದ ಈ ಸಮಸ್ಯೆ ಆಗುತ್ತಿದೆ. ಇದಲ್ಲದೇ ಹಳೇ ಮನೆಗಳಿಗೆ ಮೀಟರ್ ಬೇಕೆಂದರೆ ಕೊಡುತ್ತೇವೆ. ಹೊಸ ಮನೆಗಳಿಗೆ ಅಧಿಕೃತವಾಗಿ ಲೈಸೆನ್ಸ್​ ಇದ್ದರೆ ಮಾತ್ರ ಮೀಟರ್ ಕೊಡಲಾಗುತ್ತದೆ. ವಾಸ ಯೋಗ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ ಮೀಟರ್ ಕೊಡುತ್ತೇವೆ” ಎಂದು ತಿಳಿಸಿದರು.

ಮುಂದುವರೆದು, “ಇನ್ನು ಹಳೆ ಮನೆ ಮೇಲೆ ಹೊಸ ಮನೆ ಕಟ್ಟಿದರೆ ಮೀಟರ್ ಕೊಡಲ್ಲ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಚಿಕ್ಕ ಸೈಟ್ ಓಸಿ ಬೇಕಾಗಿಲ್ಲ ಎಂದು ವಿಧಾನಸಭೆಯಲ್ಲಿ ಮಂಡಿಸಬೇಕಾಗಿದೆ. ಅಲ್ಲಿ ಪಾಸ್ ಆಯಿತು ಎಂದರೇ ಓಸಿ ಇಲ್ಲದೇ ಚಿಕ್ಕಪುಟ್ಟ ಸೈಟ್​ ಅವರಿಗೆ ಮೀಟರ್ ಕೊಡುತ್ತೇವೆ. ಇನ್ನು ಸುಪ್ರೀಂ ಕೋರ್ಟ್ ಆದೇಶ ದೂಡ ಅಪ್ರೂವಲ್ ಸೈಟ್​ಗಳಿಗೆ ವಾಸ ಯ್ಯೋಗ ಪ್ರಮಾಣ ಪತ್ರ ಇದ್ದರೆ ಮಾತ್ರ ಕೊಡಬಹದು. ಹೊಸ ಕಟ್ಟಡಗಳಿಗೆ ಸ್ಮಾರ್ಟ್​ ಮೀಟರ್​ ಕೊಡಲಾಗುತ್ತಿದೆ. ಹಳೇ ಮೀಟರ್​ಗಳಿಗೆ ಅವಕಾಶ ಇಲ್ಲ. ಹಳೇ ಮೀಟರ್​ ಇರುವ ಹಳೇ ಮನೆಗಳಿಗೆ ಮೀಟರ್ ಕೊಡಲಾಗುತ್ತೇವೆ. 4,889 -5,000 ಮೀಟರ್ ಬೆಲೆ ಇದ್ದು, ಪಡೆಯಬೇಕಾದರೆ ಮೀಟರ್​ ಬೇಕಾದರೆ ಗ್ರಾಹಕರು ಮೊದಲು 50 ರೂಪಾಯಿ ರಿಜಿಸ್ಟರ್ ಫೀಸ್ ಕೊಟ್ಟು, ಕಂಪ್ಯೂಟರ್ ಅಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸೆಕ್ಷನ್ ಆಫೀಸರ್ ಪರಿಶೀಲನೆ ನಡೆಸಿ, ಓಸಿ ಕೊಟ್ಟರೆ ಹಣ ಭರಿಸಿದರೆ ಮೀಟರ್ ಕೊಡುತ್ತೇವೆ” ಎಂದರು.

ಮೀಟರ್ ಕೊಡದೇ ಇರುವುದು ಗುತ್ತಿಗೆದಾರರಿಗೂ ಕಿರಿಕಿರಿ: “ಸ್ಮಾರ್ಟ್​ ಮೀಟರ್​ ಕೊಡದೆ ಇರುವುದರಿಂದ ಮೀಟರ್​ ಸರ್ವಿಸ್ ಮಾಡುವ ಗುತ್ತಿಗೆದಾರರು ಕೆಲಸ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾಧ್ಯಕ್ಷ ಕೆವಿ ರವಿ ಅವರು ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿ, “ಇದರಿಂದ ಗ್ರಾಹಕರಿಗೆ, ಗುತ್ತಿಗೆದಾರರಿಗೆ ಸಮಸ್ಯೆ ಆಗುತ್ತಿದೆ. ‌ಸರ್ಕಾರ ಇದನ್ನು ಬಗೆಹರಿಸಬೇಕು. ಚಿಕ್ಕಪುಟ್ಟ ಮನೆಗಳಿಗೆ ಸಮಸ್ಯೆ ಆಗುತ್ತಿದೆ. ವಾಸ ಯೋಗ್ಯ ಪ್ರಮಾಣ ಪತ್ರ ಇಲ್ಲದಂತೆ ಸರ್ಕಾರ ಮೀಟರ್ ಕೊಡುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಒಟ್ಟು 300 ಗುತ್ತಿಗೆದಾರರು ಇದ್ದಾರೆ. ಅವರೆಲ್ಲ ಮೀಟರ್ ಸರ್ವಿಸ್ ಮಾಡಿ ಬದುಕುತ್ತಿದ್ದು. ಅದಕ್ಕೂ ಕಲ್ಲು ಬಿದ್ದಂತೆ ಆಗಿದೆ. ತಕ್ಷಣ ಸರ್ಕಾರ ಇದನ್ನು ಸರಿಪಡಿಸಬೇಕು” ಎಂದು ಚಂದ್ರನಾಯ್ಕ್ ಮಾಹಿತಿ ನೀಡಿದರು.

ಗ್ರಾಹಕರು ಹೇಳುವುದೇನು?: ಗ್ರಾಹಕರಾದ ಗಿರೀಶ್​ ದೇವರಮನೆ ಎಂಬುವರು ಮಾತನಾಡಿ, “ದಾವಣಗೆರೆಯಲ್ಲಿ ಮನೆ ಕಟ್ಟಿದ ಮೇಲೆ ವಿದ್ಯುತ್​ ಸಿಗುತ್ತದೆ ಎಂಬುದು ಅನುಮಾನ ಹುಟ್ಟಿ ಹಾಕಿದೆ. ವಿದ್ಯುತ್​ ಕೇಳಿದರೆ ವಾಸ ಯೋಗ್ಯ ಪ್ರಮಾಣ ಪತ್ರ ಕೇಳುತ್ತಿದ್ದಾರೆ. ಪಾಲಿಕೆಗೆ ಪ್ರಮಾಣ ಪತ್ರ ಕೇಳಿದರೆ ಅವರು ಚಿಕ್ಕ ಮನೆ ಎಂದು ಕೊಡುತ್ತಿಲ್ಲ. ಇನ್ನು ರೆವಿನ್ಯೂ ಸೈಟ್​ಗೆ ಓಸಿ ಪ್ರಮಾಣ ಪತ್ರ ಸಿಗುತ್ತಿಲ್ಲ. ನಮಗೆ ವಿದ್ಯುತ್ ಸಿಕ್ಕಿಲ್ಲ. ಕತ್ತಲಲ್ಲಿ ಬದುಕುವ ಪರಿಸ್ಥಿತಿ ಇದೆ. ಜನಪ್ರತಿನಿಧಿಗಳು ಇನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು. 15×20 ಚಿಕ್ಕ ನಿವೇಶನಗಳಿಗೆ ಲೈಸೆನ್ಸ್ ಕೊಡುತ್ತಿಲ್ಲ. ಅದು ಪಾಲಿಕೆಯವರು ಬರವಣಿಗೆಯಲ್ಲಿ ಕೊಡುತ್ತಿಲ್ಲ. ಇತ್ತ ಲೈಸೆನ್ಸ್​ ಇಲ್ಲ ಎಂದರೆ ಮೀಟರ್ ಕೊಡುತ್ತಿಲ್ಲ. ದೊಡ್ಡ ಸೈಟ್​ಗಳಿಗೆ ಅಲ್ಲ ಯಾಡಿಗೂ ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆಯಲ್ಲಿ ವಾಸ ಯೋಗ್ಯ ಪ್ರಮಾಣ ಪತ್ರ ಬೇಕೆನ್ನುತ್ತಿದ್ದಾರೆ. ಚಿಕ್ಕ ಪುಟ್ಟ ಸೈಟ್​ಗಳಲ್ಲಿ ನಿರ್ಮಿಸಿದ ಮನೆಗಳಿಗೆ ಒಸಿ ಬೇಕಿಲ್ಲ ಎಂದು ವಿಧಾನ ಸಬೆಯಲ್ಲಿ ಮಂಡಿಸಲಾಗಿದೆ. ಅದು ಪಾಸ್ ಆಗ್ಬೇಕಾಗಿದೆ” ಎಂದರು.

ಗ್ರಾಹಕರಾದ ಸೈಯ್ಯದ್​ ಅಹ್ಮದ್​​ ಅವರು ಪ್ರತಿಕ್ರಿಯಿಸಿ, “ಒಸಿ ಇಲ್ಲ ಸಿಸಿ ಇಲ್ಲ, ಇಲ್ಲಿ ನೋಡಿದರೆ ಜನರಿಗೆ ಸಮಸ್ಯೆ ಆಗುತ್ತಿದೆ. ಸರ್ಕಾರ ಚಿಕ್ಕಪುಟ್ಟ ಸೈಟ್ ಗಳಿಗೆ ಓಸಿ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದೆ. ಆದರೇ ನಮಗೆ ಆದೇಶ ಬಂದಿಲ್ಲ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು. ಮೀಟರ್ ಬೇಕೆಂದರೆ ವಾಸ ಯೋಗ್ಯ ಪ್ರಮಾಣ ಪತ್ರ ಬೇಕೆನ್ನುತ್ತಾರೆ. ಪಾಲಿಕೆಯವರು ಅದನ್ನು ಕೊಡುತ್ತಿಲ್ಲ. ಜನ ಮೀಟರ್​ಗಾಗಿ ಅಲೆದಾಡುತ್ತಿದ್ದಾರೆ. 6 ತಿಂಗಳು ಆಗುತ್ತಿದೆ ಸಮಸ್ಯೆ ಬಗೆಹರಿದಿಲ್ಲ. ಮೀಟರ್​ಗಾಗಿ ಕಾದು ಕೂತಿದ್ದೇವೆ” ಎಂದರು.

Related Articles

Leave a Reply

Your email address will not be published. Required fields are marked *

Back to top button