
ನವದೆಹಲಿ, ಮಾರ್ಚ್ 28: ದೇಶದ ಅತಿದೊಡ್ಡ ಸುದ್ದಿ ಜಾಲವಾದ ಟಿವಿ9 ಸಂಸ್ಥೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT 2025- What India Thinks Today) ಎಂಬ ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿಯನ್ನು ಇಂದಿನಿಂದ (ಮಾರ್ಚ್ 28) ರಿಂದ ಆಯೋಜಿಸುತ್ತಿದೆ. ಟಿವಿ9 ನ ಜಾಗತಿಕ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷ ಅತಿಥಿಯಾಗಿದ್ದು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜಕೀಯ ನಾಯಕರು ಮಾತ್ರವಲ್ಲದೆ ಉದ್ಯಮ, ಕ್ರೀಡೆ, ಸಿನಿಮಾ ಜಗತ್ತಿನ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.ಟಿವಿ9 ಸಂಸ್ಥೆ ರಾಜಧಾನಿ ದೆಹಲಿಯ ಭಾರತ ಮಂಟಪದಲ್ಲಿ ಮತ್ತೊಮ್ಮೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮಕ್ಕೆ ಮಹಾ ವೇದಿಕೆ ಸಜ್ಜಾಗಿದೆ. ಎರಡು ದಿನಗಳು (ಮಾರ್ಚ್ 28, 29 ) ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ವಿಚಾರ ವಿನಿಮಯ ಮಾಡಲಿದ್ದಾರೆ.ಟಿವಿ9 ಸಂಸ್ಥೆಯ ಈ ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದು, ಸಂಜೆ ಭವ್ಯ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಕಳೆದ ಭಾರಿಯ ಆವೃತ್ತಿಯಲ್ಲೂ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದರು. ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸುವುದರ ಜೊತೆಗೆ ಟಿವಿ9 ಸಂಸ್ಥೆಯನ್ನು ಶ್ಲಾಘಿಸಿದ್ದರು. ಇನ್ನು ಪ್ರಧಾನಿ ಮೋದಿಯವರೊಂದಿಗೆ ಅನೇಕ ಕೇಂದ್ರ ಸಚಿವರು ಕೂಡ ಭಾಗವಹಿಸಲಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಮನೋಹರ್ ಲಾಲ್ ಖಟ್ಟರ್, ಪೀಯುಷ್ ಗೋಯಲ್, ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ಜಿ ಕಿಶನ್ ರೆಡ್ಡಿ ಮತ್ತು ಚಿರಾಗ್ ಪಾಸ್ವಾನ್ ಮಹಾಮಂಚ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.ಧಾರ್ಮಿಕ ಗುರು ಧೀರೇಂದ್ರ ಕೃಷ್ಣ ಶಾಸ್ತ್ರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಸುನೀಲ್ ಅಂಬೇಕರ್ ಕೂಡ ವೇದಿಕೆ ಅಲಂಕರಿಸಲಿದ್ದಾರೆ. ಭಾರತದ ಮಾಜಿ ಹೈಕಮಿಷನರ್ ಅಜಯ್ ಬಿಸಾರಿಯಾ ಕೂಡ ಉಪಸ್ಥಿತರಿರಲಿದ್ದಾರೆ.ಇನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೆ ವಿರೋಧ ಪಕ್ಷದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಭವ್ಯ ವೇದಿಕೆಯನ್ನು ಅಲಂಕರಿಸಲಿದ್ದಾರೆ.
ರಾಜಕೀಯ ನಾಯರನ್ನು ಹೊರತುಪಡಿಸಿ ಉದ್ಯಮ ಕ್ಷೇತ್ರದ ಅನೇಕ ಹೆಸರಾಂತ ವ್ಯಕ್ತಿಗಳು ಸಹ ಉಪಸ್ಥಿತರಿರಲಿದ್ದಾರೆ. ಮಾರುತಿ ಸುಜುಕಿ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರ್ತಿ, ಮೈಕ್ರೋಸಾಫ್ಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಉಪಾಸನಾ ಅರೋರಾ ಮತ್ತು ಯಶೋದಾ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಎಂಡಿ ಸೇರಿದಂತೆ ಉದ್ಯಮ ಕ್ಷೇತ್ರದ ಗಣ್ಯರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ.