ವಿಜಯಪುರ: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ (sindgi, hangal by election) ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (bs yediyurappa) ಕೂಡ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ತಂಗಿದ್ದ ಬಿಎಸ್ವೈ ಇಡೀ ದಿನ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಎದುರಾಳಿ ಪಕ್ಷಗಳ ಹೇಳಿಕೆಗಳಿಗೂ ಬಿಎಸ್ವೈ ತಿರುಗೇಟು ಕೊಟ್ಟರು. RSS ವಿರುದ್ಧ ನಿರಂತರ ವಾಗ್ದಾಳಿಯಲ್ಲಿ ತೊಡಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ (hd kumaraswamy) ನಯವಾಗಿಯೇ ಟಾಂಗ್ ಕೊಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮತನಾಡಬಾರದು. ಸಂಘದ ಬಗ್ಗೆ ಟೀಕೆ ಮಾಡುವವರಿಗೆ ಗೊತ್ತಿರಲಿ, ಈ ದೇಶದ ರಾಷ್ಟ್ರಪತಿ ಕೂಡಾ ಸಂಘದ ಕಾರ್ಯಕರ್ತ. ದೇಶದ ಪ್ರಧಾನಿ ಕೂಡಾ ಆರ್ ಎಸ್ಎಸ್ ಸಂಘದ ಹಿನ್ನೆಲೆಯವರು ಎಂದು ಉಲ್ಲೇಖಿಸಿ ಕುಟುಕಿದರು.
RSS ವಿರುದ್ಧ ಮಾತಾಡಿದ್ರೆ ಮುಸ್ಲಿಮರ ಓಟು ಸಿಗಲ್ಲ
ನಾನು ಕೂಡಾ ಆರ್ ಎಸ್ ಎಸ್ ನಿಂದ ಬಂದವನು. ಈ ದೇಶದಲ್ಲಿ 26 ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಎಲ್ಲರೂ ಆರ್ ಎಸ್ ಎಸ್ ನಿಂದ ಬಂದವರು. ಸಂಘದ ಬಗ್ಗೆ ಕೇಳುವ ನೈತಿಕ ಹಕ್ಕು ಕುಮಾರಸ್ವಾಮಿ ಅವರಿಗಿಲ್ಲ.ಸಂಘದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡುವ ಅಗತ್ಯತೆ ಇಲ್ಲ, ಉತ್ತರ ನೀಡುವ ಅಗತ್ಯತೆಯೂ ಇಲ್ಲ. ಯಾವ ಪಕ್ಷದ ಬಗ್ಗೆಯೂ ಯಾರೂ ಹಗುರವಾಗಿ ಮಾತನಾಡಬಾರದು. ಮುಸ್ಲಿಮರ ಓಲೈಕೆಗೆ ಹೆಚ್ಡಿಕೆ ಹೀಗೆ ಮಾತನಾಡ್ತಿದ್ದಾರೆ. RSS ವಿರುದ್ಧ ಮಾತಾಡಿದ್ರೆ ಮುಸ್ಲಿಂ ಓಟು ಸಿಗುತ್ವೆ ಅನ್ನೋ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಕಿಡಿಕಾರಿದರು.