ಸಿನಿಮಾ

ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ

ಮಹಾರಾಷ್ಟ್ರ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರ ವಿರುದ್ಧ ಸುಮಾರು ಒಂದೂವರೆ ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದ್ದು, ಮುಂಬೈ ಮೂಲದ ಉದ್ಯಮಿಯೊಬ್ಬರ ಈ ಆರೋಪಕ್ಕೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮತ್ತು ನನ್ನ ಪತಿಯ ವಿರುದ್ಧ ಕೇಳಿ ಬಂದ ಆರೋಪದಿಂದ ನನಗೆ ಆಘಾತವಾಯಿತು. ಖಾಸಿಫ್ ಖಾನ್ ಎಂಬಾತ ಎಸ್​ಎಫ್​ಎಲ್ ಫಿಟ್ನೆಸ್ ಸೆಂಟರ್​​ ನಡೆಸುತ್ತಿದ್ದು, ಆತನೇ ಎಸ್​ಎಫ್​ಎಲ್ ಬ್ರಾಂಡ್​ನ ಹೆಸರಿನ ಹಕ್ಕುಗಳನ್ನು ಹೊಂದಿದ್ದನು. ದೇಶಾದ್ಯಂತ ಫಿಟ್ನೆಸ್ ಸೆಂಟರ್​ಗಳನ್ನು ತೆರೆಯಲು ಆತ ಮುಂದಾಗಿದ್ದನು. ಎಲ್ಲ ಅಧಿಕಾರಗಳೂ ಆತನಿಗಿದ್ದವು. ನಮಗೆ ಈ ಅವ್ಯವಹಾರದ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.

ನಾವು ಖಾಸಿಫ್ ಖಾನ್​ನಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ. ಎಲ್ಲ ಫ್ರಾಂಚೈಸಿಗಳು ನೇರವಾಗಿ ಖಾಸಿಫ್​ ಖಾನ್​ನೊಂದಿಗೆ ವ್ಯವಹಾರ ನಡೆಸುತ್ತಿದ್ದವು. ಕಂಪನಿಯನ್ನು 2014ರಲ್ಲಿ ಮುಚ್ಚಲಾಗಿದ್ದು, ಎಲ್ಲವೂ ಆತನಿಗೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.

28 ವರ್ಷಗಳಿಂದ ನಾನು ಕಷ್ಟ ಪಡುತ್ತಿದ್ದೇನೆ. ನನ್ನ ಹೆಸರು ಮತ್ತು ಗೌರವಕ್ಕೆ ಧಕ್ಕೆ ತರಲು ಕೆಲವರು ಮುಂದಾದಾಗ ತುಂಬಾ ನೋವಾಗುತ್ತದೆ ಎಂದು ಟ್ವಿಟರ್​ನಲ್ಲಿ ನಟಿ ಶಿಲ್ಪಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ (Bandra Police station) 13/11/21 ರ0ದು ನಿತಿನ್ ಬಾರೈ ಎಂಬ ಉದ್ಯಮಿಯು ದೂರು ದಾಖಲಿಸಿದ್ದು, 2014ರ ಜುಲೈನಲ್ಲಿ ಎಸ್‌ಎಫ್‌ಎಲ್ ಫಿಟ್‌ನೆಸ್ ಕಂಪನಿಯ (SFL Fitness Company) ನಿರ್ದೇಶಕ ಕಾಶಿಫ್ ಖಾನ್, ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರು ನನಗೆ ಪುಣೆ ಸುತ್ತಮುತ್ತ ಎರಡು ಸ್ಥಳಗಳಲ್ಲಿ ಜಿಮ್​ ಮತ್ತು ಸ್ಪಾ​(ಮಸಾಜ್) ಸೆಂಟರ್​ ತೆರೆದು ಲಾಭ ಗಳಿಸಬಹುದೆಂದು ನಂಬಿಸಿ ನನಗೆ 1.51 ಕೋಟಿ ರೂ. ಹಣ ಹೂಡಿಕೆ ಮಾಡುವಂತೆ ಕೇಳಿದ್ದರು.

ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಹಣ ಪಡೆದು ನನಗೆ ಮೋಸ ಮಾಡಿದ್ದಾರೆ. ಹಣವನ್ನು ಮರಳಿ ಕೇಳಿದಾಗ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button